– ಚಿರತೆ ನೋಡಿ ಭಯ ಬಿದ್ದ ಹಳ್ಳಿಗರು
ಕಾರವಾರ: ಮನೆಯೊಂದಕ್ಕೆ ಚಿರತೆ ನುಗ್ಗಿ ಕಿತಾಪತಿ ಮಾಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿರತೆಗಳಿಗೇನೂ ಕಮ್ಮಿ ಇಲ್ಲ. ಆಹಾರದ ಕೊರತೆಯಿಂದ ಚಿರತೆಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗಿದೆ. ಹೀಗಾಗಿ ರಾತ್ರಿ ವೇಳೆ ಚಿರತೆಗಳು ಊರಿನತ್ತ ಮುಖ ಮಾಡುತ್ತಿವೆ. ಆಹಾರ ಅರಸಿ ಕಾಡಿನಿಂದ ಅಂಕೋಲ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬವರ ಮನೆಗೆ ಇಂದು ಬೆಳಗಿನ ಜಾವ ನುಗ್ಗಿದ್ದ ಚಿರಿತೆ ಮನೆಯ ಬಳಿ ಇದ್ದ ನಾಯಿ ಹಿಡಿಯುವ ಪ್ರಯತ್ನ ಮಾಡಿದೆ.
ಆದರೆ ನಾಯಿ ಚಿರತೆ ಬಾಯಿಯಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಇನ್ನೇನು ಆಹಾರ ಮಿಸ್ ಆಯ್ತು ಅನ್ನುವಷ್ಟರಲ್ಲಿ, ಮನೆಯಲ್ಲಿ ಕೋಳಿಗಳಿದ್ದ ಗೂಡು ಕಾಣಿಸಿದ್ದು ಗೂಡಿನ ಒಳಕ್ಕೆ ಬಾಯಿ ಹಾಕಿ ಕೋಳಿ ಹಿಡಿದು ಚಿರತೆ ಕಾಡಿಗೆ ಮರಳಿದೆ.
ಇತ್ತ ಮನೆಯವರು ಬೆಳಗ್ಗೆ ಗೂಡಿನಲ್ಲಿ ಕೋಳಿ ಇಲ್ಲದ್ದನ್ನು ಗಮನಿಸಿ ಯಾರೋ ಕಳ್ಳರು ಕದ್ದು ಹೋಗಿರಬೇಕು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಗಮನಿಸಿದ್ದಾರೆ. ಆಗ ಕೋಳಿ ಕಳ್ಳತನ ಮಾಡಿದ್ದು ಯಾರು ಎಂದು ನೋಡಿ ಹೌಹಾರಿದ್ದಾರೆ. ಸಿ.ಸಿ ಟಿವಿಯಲ್ಲಿ ಸೆರೆಯಾದ ಈ ವೀಡಿಯೋ ಊರಿನ ಜನರಲ್ಲಿ ಭಯ ಮೂಡಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.