ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಲಾರಿ ಮನೆಗೆ ನುಗ್ಗಿದ ಪರಿಣಾಮ ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಬಾಳೆಹೊನ್ನೂರು ಸಮೀಪದ ಜೇನುಗದ್ದೆ ಗ್ರಾಮದಲ್ಲಿ ಘಟನೆ ನಡೆದಿದ್ದು, 10 ವರ್ಷದ ಬಾಲಕ ಸುರೇಶ್ ಲಾರಿ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರಿನಿಂದ ಕುಂದಾಪುರಕ್ಕೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲೈನ್ ಮನೆಗೆ ನುಗ್ಗಿದೆ. ಇದರಿಂದ ಮನೆಯ ಅರ್ಧ ಭಾಗ ಸಂಪೂರ್ಣ ಜಖಂಗೊಂಡಿದೆ. ಅಲ್ಲದೆ ಮನೆ ಮುಂದೆ ಆಟವಾಡುತ್ತಿದ್ದ 10 ವರ್ಷದ ಬಾಲಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬಾಳೆಹೊನ್ನೂರು ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಮಂಜುನಾಥ್ ಗೌಡ ಕುಟುಂಬ, ಜೇನುಗದ್ದೆ ಗ್ರಾಮದಲ್ಲಿ ಲೈನ್ ಮನೆಗಳಲ್ಲಿ ವಾಸವಿತ್ತು. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಲಕ ಸಾವನ್ನಪ್ಪಿದ್ದರಿಂದ ಸ್ಥಳೀಯರು ಮರುಗಿದ್ದಾರೆ.