ಮನೆಗೆಲಸಕ್ಕೆಂದು ದುಬೈಗೆ ತೆರಳಿ ಮಹಿಳೆ ಪರದಾಟ- ಕೊನೆಗೂ ತಾಯ್ನಾಡಿಗೆ

Public TV
2 Min Read
dubai woman

– ತಾಯ್ನಾಡಿಗೆ ಮರಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಮಂಗಳೂರು: ಮನೆ ಕೆಲಸಕ್ಕೆಂದು ದುಬೈಗೆ ತೆರಳಿದ್ದ ಮಹಿಳೆ ಒಂದು ವರ್ಷದಿಂದ ಕುಟುಂಬದವರ ಸಂಪರ್ಕದಿಂದ ನಾಪತ್ತೆಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆದ ಪರಿಣಾಮ ಇದೀಗ ತಾಯ್ನಾಡಿಗೆ ಮರಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶಶಿಕಲಾ ಅವರು ದುಬೈಗೆ ಮನೆಗೆಲಸಕ್ಕಾಗಿ ತೆರಳಿದ್ದರು. ಆದರೆ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೆತ್ತವರು ಮತ್ತು ಮಕ್ಕಳು ಅಳಲು ತೋಡಿಕೊಂಡು ಮಾಧ್ಯಮಗಳಿಗೆ ಶಶಿಕಲಾ ಅವರ ತಾಯಿ ನೀಡಿದ ಹೇಳಿಕೆಯ ವೀಡಿಯೋ ನೀಡಿದ್ದರು. ಬಳಿಕ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಎರಡು ವಾರಗಳ ಒಳಗಾಗಿ ಶಶಿಕಲಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಹೆತ್ತವರನ್ನು ಸೇರಿಕೊಂಡಿದ್ದಾರೆ.

dubai woman 2 medium

ಶಶಿಕಲಾ ಅವರು ಯಶಸ್ವಿಯಾಗಿ ತಾಯ್ನಾಡಿಗೆ ಮರಳಲು ಪಟ್ಟ ಪ್ರಯತ್ನದ ಕುರಿತು ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ಮಾತನಾಡಿದ್ದು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿಯನ್ನು ತಿಳಿದು ಕೆಎನ್‍ಆರ್‍ಐ ಸದಸ್ಯರಾದ ಹರೀಶ್ ಕೋಡಿಯವರು ನನ್ನನ್ನು ಸಂಪರ್ಕಿಸಿದರು. ನಮ್ಮ ತಂಡ ಕೂಡಲೇ ಮನೆಗೆಲಸಕ್ಕೆ ಜನರನ್ನು ಕರೆತರುವ ಏಜೆಂಟ್ ಗಳ ಮೂಲಕ ಶಶಿಕಲಾ ಅವರ ಪ್ರಸಕ್ತ ವಾಸ ಸ್ಥಳದ ಮಾಹಿತಿ ಕಲೆಹಾಕಿ ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನ ಛಾಯ ಕೃಷ್ಣಮೂರ್ತಿಯವರಿಗೆ ಮಾಹಿತಿ ನೀಡಿದೆವು. ಛಾಯರವರು ಶಶಿಕಲಾರನ್ನು 24ಗಂಟೆಯೊಳಗಾಗಿ ಅಜ್ಮಾನ್ ಶೆಲ್ಟರ್ ಹೋಮ್ ಗೆ ಕರೆತಂದು ಅವರನ್ನು ತಾಯ್ನಾಡಿಗೆ ತೆರಳಲು ಬೇಕಾದ ವ್ಯವಸ್ಥೆ ಮಾಡಿದೆವು ಎಂದಿದ್ದಾರೆ.

ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೇ ಇದ್ದ ಶಶಿಕಲಾ ಅವರ ಮೇಲೆ ಯುಎಇಯಲ್ಲೂ ಪೊಲೀಸ್ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ಠಾಣೆಗೆ ಸಂಪರ್ಕಿಸಿ ಬಗೆಹರಿಸಲಾಯಿತು. ಅಲ್ಲದೆ ಅವರ ಪಾಸ್ ಪೋರ್ಟ್ ಕಳೆದುಹೋಗಿತ್ತು. ಹೀಗಾಗಿ ತಾತ್ಕಾಲಿಕವಾಗಿ ತಾಯ್ನಾಡಿಗೆ ತಲುಪುವ ಸಲುವಾಗಿ ‘ವೈಟ್ ಪಾಸ್ ಪೋರ್ಟ್’ ವ್ಯವಸ್ಥೆ ಮಾಡಿಲಾಯಿತು. ಎಮರ್ಜೆನ್ಸಿ ಎಕ್ಸಿಟ್ ಸರ್ಟಿಫಿಕೇಟ್ ಪಡೆದು, ಇಮಿಗ್ರೇಷನ್ ನಲ್ಲಿ ಶಶಿಕಲಾ ಮೇಲಿದ್ದ ದಂಡವನ್ನು ಪಾವತಿಸಿ, ಕೊರೊನಾ ಪರೀಕ್ಷೆ ನಡೆಸಿ, ಟಿಕೆಟ್ ನೀಡಿ, ವಿಮಾನ ನಿಲ್ದಾಣ ತಲುಪಿಸುವವರೆಗೂ ಕನ್ನಡತಿ ಛಾಯ ಕೃಷ್ಣಮೂರ್ತಿ ಅವರು ಸಂಪೂರ್ಣವಾಗಿ ಸಹಕರಿಸಿದರು. ಸತತ 12 ದಿನಗಳ ಪ್ರಯತ್ನದ ಫಲವಾಗಿ ಶಶಿಕಲಾ ತಾಯ್ನಾಡಿಗೆ ಮರಳಿದರು ಎಂದು ಹಿದಾಯತ್ ವಿವರಿಸಿದ್ದಾರೆ.

WhatsApp Image 2021 03 23 at 10.18.12 PM medium

ಶಶಿಕಲಾ ಸಮಸ್ಯೆ ಬಗ್ಗೆ ಗಮನ ಸೆಳೆದ ಮಾಧ್ಯಮದವರಿಗೂ, ವಿಶೇಷವಾಗಿ ಕಾಳಜಿ ವಹಿಸಿದ ಹರೀಶ್ ಕೋಡಿ, ಮೀನ ಹರೀಶ್ ಕೋಡಿಯವರಿಗೂ, ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದ ಕೆಎನ್‍ಆರ್‍ಐ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಇಮ್ರಾನ್ ಎರ್ಮಾಳ್ ಮತ್ತು ಅನ್ಸಾರ್ ರವರಿಗೂ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಧನ್ಯವಾದ. ಅಲ್ಲದೆ ಮನೆಗೆಲಸಕ್ಕೆ ಬರಲು ಇಚ್ಛಿಸುವ ಮಹಿಳೆಯರು ಇಲ್ಲಿರುವ ಕಾನೂನು, ಕೆಲಸದ ಕರಾರುಗಳನ್ನು ಪರಿಶೀಲಿಸಿದ ಬಳಿಕ ಬರಬೇಕು. ಏಜೆಂಟ್ ಗಳ ಮಾತಿಗೆ ಮರುಳಾಗಿ ಮೋಸಹೋಗಬಾರದು. ಶಶಿಕಲಾ ಪಟ್ಟ ಸಂಕಷ್ಟ ಪ್ರತಿಯೊಬ್ಬರಿಗೂ ಜಾಗೃತಿಯ ಪಾಠವಾಗಬೇಕು ಎಂದು ಹಿದಾಯತ್ ಅಡ್ಡೂರ್ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *