– ಮದುವೆ ಮನೆಯಲ್ಲಿ ಫುಲ್ ಟೆನ್ಶನ್
ಯಾದಗಿರಿ: ಇಷ್ಟು ದಿನ ಮಹಾರಾಷ್ಟ್ರದ ಕಂಟಕ ಅನುಭವಿಸುತ್ತಿದ್ದ ಯಾದಗಿರಿಗೆ ಈಗ ಬೆಂಗಳೂರಿನ ಕಂಟಕ ಕೂಡ ಎದುರಾಗಿದೆ. ಬೆಂಗಳೂರಿನಿಂದ ತನ್ನ ಮದುವೆ ಸಲುವಾಗಿ ಜಿಲ್ಲೆಗೆ ಬಂದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಮದುವೆಯಾಗಬೇಕಿದ್ದ ಮದುಮಗ ಈಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಜಿಲ್ಲೆಯ ಶಹಾಪುರ ತಾಲೂಕಿನ ಹಳ್ಳಿಯೊಂದರ ಯುವಕನಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಬಂದ ಯುವಕನ ಮದುವೆ ಇದೇ ತಿಂಗಳ 13ಕ್ಕೆ ಫಿಕ್ಸ್ ಆಗಿತ್ತು. ಹೀಗಾಗಿ ಕಳೆದ ತಿಂಗಳ ಜೂನ್ 29 ರಂದು ಬೆಂಗಳೂರಿನಿಂದ ಯಾದಗಿರಿಗೆ ಈ ಯುವಕ ಬಂದಿದ್ದನು.
ಬೆಂಗಳೂರಿನಿಂದ ಬರುವಾಗಲೇ ಯುವಕನ ಆರೋಗ್ಯ ಹದಗೆಟ್ಟು, ತೀವ್ರ ಶೀತದಿಂದ ಬಳಲುತ್ತಿದ್ದ ಎನ್ನಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಯುವಕನಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಸದ್ಯ ಯುವಕನ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಮುಂದಿನ ಸೋಮವಾರ ನಡೆಯಬೇಕಿದ್ದ ಮದುವೆ ಕೆಲಸಕ್ಕೆ ಯುವಕ ಓಡಾಡಿದ್ದಾನೆ. ಹೀಗಾಗಿ ಮದುವೆ ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಮದುವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.