– ಪತ್ನಿಗೆ ಅಶ್ಲೀಲ ಮೆಸೇಜ್ ಮಾಡಿ ಪತಿಯಿಂದ ಕಿರುಕುಳ
– 10 ಲಕ್ಷ, 20 ತೊಲ ಚಿನ್ನ ಕೊಟ್ಟಿದ್ರೂ ಸಾಕಾಗಿಲ್ಲ
ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಮದುವೆಯಾದ ನಾಲ್ಕು ತಿಂಗಳಿಗೆ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಧರ್ಮಪುರಂ ಗ್ರಾಮದ ನಿವಾಸಿ ದಿವ್ಯಾ (22) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಮೃತ ದಿವ್ಯಾ ಹೈದರಾಬಾದ್‍ನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಇದೇ ವರ್ಷ ಫೆಬ್ರವರಿ 22 ರಂದು ಅದೇ ಗ್ರಾಮದ ಪ್ರವೀಣ್ ರೆಡ್ಡಿ ಜೊತೆ ವಿವಾಹವಾಗಿದ್ದಳು.
ಮದುವೆಯ ಸಮಯದಲ್ಲಿ ದಿವ್ಯಾ ಪೋಷಕರು 10 ಲಕ್ಷ ರೂ. ನಗದು, 20 ತೊಲ ಚಿನ್ನ ಮತ್ತು ಒಂದು ಎಕರೆ ಭೂಮಿಯನ್ನು ವರದಕ್ಷಿಣೆಯಾಗಿ ಪ್ರವೀಣ್ ರೆಡ್ಡಿಗೆ ನೀಡಲಾಗಿತ್ತು. ಮದುವೆ ನಂತರವೂ ದಿವ್ಯಾ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಪತಿ ಪ್ರವೀಣ್ ರೆಡ್ಡಿ ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದನು.
ವಿವಾಹವಾದ ಕೆಲವೇ ದಿನಗಳಲ್ಲಿ ಹೆಚ್ಚುವರಿ ವರದಕ್ಷಿಣೆ ತರುವಂತೆ, ಇಲ್ಲವಾದರೆ ಜಮೀನನ್ನು ಮಾರಾಟ ಮಾಡುವಂತೆ ಪತಿ, ಅತ್ತೆ ಮತ್ತು ಮಾವ ದಿವ್ಯಾಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ವಾಟ್ಸಾಪ್ ಮೂಲಕ ಪತಿ ಅಶ್ಲೀಲ ಮೆಸೇಜ್ ಕಳುಹಿಸುವ ಮೂಲಕ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ದಿವ್ಯಾ ನಾಲ್ಕು ದಿನಗಳ ಹಿಂದೆ ಹೈದರಾಬಾದ್‍ನಿಂದ ತನ್ನ ಗ್ರಾಮಕ್ಕೆ ಹಿಂದಿರುಗಿ ಪೋಷಕರಿಗೆ ನಡೆದ ಎಲ್ಲಾ ವಿಚಾರವನ್ನು ತಿಳಿಸಿದ್ದಾಳೆ.
ಮಂಗಳವಾರ ದಿವ್ಯಾ ಪೋಷಕರು ಮಗಳನ್ನು ಕರೆದುಕೊಂಡು ಪ್ರವೀಣ್ ರೆಡ್ಡಿ ಮನೆಗೆ ಹೋಗಿ ಮಾತನಾಡಿದ್ದಾರೆ. ಈ ವೇಳೆ ಎರಡು ಕುಟುಂಬದವರ ಮಧ್ಯೆ ಜೋರಾಗಿ ಗಲಾಟೆ ನಡೆದಿದೆ. ಇದರಿಂದ ನೊಂದ ದಿವ್ಯಾ ಗ್ರಾಮದ ಹೊರವಲಯದಲ್ಲಿ ತನ್ನ ತಾಯಿಯ ಜಮೀನಿನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ದಿವ್ಯಾ ಪೋಷಕರು ಪತಿ ಮತ್ತು ಅತ್ತೆ-ಮಾವ ಮೂವರ ವಿರುದ್ಧ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹೆಚ್ಚುವರಿ ವರದಕ್ಷಿಣೆ ನೀಡುವಂತೆ ನನ್ನ ಮಗಳಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತ ಮದುವೆಯಾದ ನಾಲ್ಕು ತಿಂಗಳಿಗೆ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.