ಹೈದರಾಬಾದ್: ಮದುವೆ ಆಗಿ ಮೂರು ವರ್ಷಗಳಾದರೂ ಮಕ್ಕಳಾಗಿಲ್ಲ ಎಂದು ಕೀಟನಾಶಕ ಕುಡಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಜನ್ನಾರಾಮ್ ಮಂಡಲದಲ್ಲಿ ನಡೆದಿದೆ.
ಸಿಂಧುಜಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜನ್ನಾರಾಮ್ ಮಂಡಲದ ಚಿಂತಗುಡ ನಿವಾಸಿ ಸಿಂಧುಜಾ ಮೂರು ವರ್ಷಗಳ ಹಿಂದೆ ಅದೇ ಗ್ರಾಮದ ವೆಂಕಟೇಶ್ ಜೊತೆ ಮದುವೆಯಾಗಿದ್ದಳು.
ಮದುವೆ ಆಗಿ ಮೂರು ವರ್ಷವಾದರೂ ಸಿಂಧುಜಾಗೆ ಮಕ್ಕಳಾಗಿಲ್ಲ. ಇದರಿಂದ ಸಿಂಧುಜಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಕೊನೆಗೆ ಇದರಿಂದ ನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೀಟನಾಶಕವನ್ನು ಕುಡಿದಿದ್ದಾಳೆ. ತಕ್ಷಣ ಕುಟುಂಬದವರು ನೋಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಂಧುಜಾ ಮೃತಪಟ್ಟಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.