ಬೆಂಗಳೂರು: ಲಾಕ್‍ಡೌನ್ ಸಡಲಿಕೆಯ ನಂತರ ಮದ್ಯ ಸಿಗುತ್ತಿದೆ ಎಂದು ಮದ್ಯಪ್ರಿಯರು ಸಖತ್ ಖುಷಿಪಟ್ಟಿದ್ದರು. ಆದರೆ ಈಗ ಮದ್ಯಪ್ರಿಯರಿಗೆ ತನ್ನ ನೆಚ್ಚಿನ ಬ್ರಾಂಡ್ ಸಿಗದೆ ಪರದಾಡುವಂತೆ ಆಗಿದೆ.
ಕಳೆದ ಮೂರು ದಿನಗಳಿಂದ ತಮ್ಮ ನೆಚ್ಚಿನ ಬ್ರಾಂಡ್ ಸಿಗದೆ ಮದ್ಯಪ್ರಿಯರು ಒದ್ದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.33 ಫಾರ್ಮುಲಾದಲ್ಲಿ ಮದ್ಯ ತಯಾರಿಕಾ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ನಿರೀಕ್ಷೆಯಷ್ಟು ಮದ್ಯ ಸರಬರಾಜು ಆಗುತ್ತಿಲ್ಲ. ಈ ಕಾರಣದಿಂದ ಮದ್ಯ ಪ್ರಿಯರು ಶಾಕ್‍ಗೆ ಒಳಗಾಗಿದ್ದಾರೆ.
ಹಳೆ ಸ್ಟಾಕ್ ಖಾಲಿ ಮಾಡಿ ಡಿಪ್ಪೋದಲ್ಲಿ ಇದ್ದ ಸ್ಟಾಕ್ ಅನ್ನು ಮದ್ಯದಂಗಡಿಗಳು ತರಿಸಿ ಮಾರಾಟ ಮಾಡಲಾಗುತ್ತಿವೆ. ಆದರೆ ಬಹುತೇಕ ಎಂ.ಆರ್.ಪಿ, ಎಂಎಸ್‍ಐಎಲ್‍ಗಳಲ್ಲಿ ಬ್ರಾಂಡೆಡ್ ಡ್ರಿಂಕ್ಸ್ ಬಾಟಲ್‍ಗಳ ಕೊರತೆ ಉಂಟಾಗಿದೆ. ಈ ಕಾರಣಕ್ಕೆ ಲಾಡ್ಜ್, ಕ್ಲಬ್, ಬಾರ್ ಗಳ ಸ್ಟಾಕ್ ಖಾಲಿ ಮಾಡಲು ಸರ್ಕಾರ ಸೂಚನೆ ನೀಡಿದ್ದ ಹಿನ್ನೆಲೆ ಅಲ್ಲಿ ತಮ್ಮ ನೆಚ್ಚಿನ ಬ್ರಾಂಡ್ ಕೊಂಡು ಮದ್ಯ ಪ್ರಿಯರು ಕುಡಿಯುತ್ತಿದ್ದಾರೆ.
ಆದರೆ ಇತ್ತೀಚೆಗೆ ಅಲ್ಲೂ ಕೂಡ ಸ್ಟಾಕ್ ಖಾಲಿಯಾದ ಹಿನ್ನೆಲೆ ಎಂಎಸ್‍ಐಎಲ್, ಎಂ.ಆರ್.ಪಿಗಳಲ್ಲಿ ನಿಗದಿತ ಬ್ರಾಂಡ್‍ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲವರು ಅನಿವಾರ್ಯವಾಗಿ ಇರುವ ಬ್ರಾಂಡ್‍ಗೆ ಹೊಂದಾಣಿಕೆ ಮಾಡಿಕೊಂಡು ಕುಡಿಯುತ್ತಿದ್ದಾರೆ. ಆದರೆ ನೆಚ್ಚಿನ ಬ್ರಾಂಡ್‍ಗೆ ಸಿಮೀತವಾಗಿರುವ ಮದ್ಯವ್ಯಸನಿಗಳಿಗೆ ಬಹುತೇಕ ನಿರಾಸೆಯಾಗಿದೆ. ತಮ್ಮ ನೆಚ್ಚಿನ ಬ್ರಾಂಡ್ ಸಿಗದೆ ಪರದಾಡುತ್ತಿದ್ದಾರೆ.
ದೇಶದಲ್ಲಿ ಸಂಪೂರ್ಣ ಲಾಕ್‍ಡೌನ್ ಸಡಲಿಕೆ ಆಗದ ಹಿನ್ನೆಲೆ ಬೇರೆ ರಾಜ್ಯಗಳಿಂದ ಬರಬೇಕಿದ್ದ ಎಣ್ಣೆ ಸ್ಟಾಕ್ ಸಹ ಸರಿಯಾಗಿ ಬರುತ್ತಿಲ್ಲ. ಇನ್ನೊಂದೆಡೆ ಬೇಡಿಕೆಗೆ ಪೂರಕವಾದ ಮದ್ಯ ಉತ್ಪಾದನೆಯು ಆಗುತ್ತಿಲ್ಲ. ಕಳೆದ ಮೂರು ದಿನದದಿಂದ ಮದ್ಯ ಪ್ರಿಯರಿಗೆ ತನ್ನ ನೆಚ್ಚಿನ ಬ್ರಾಂಡ್ ಸರಿಯಾಗಿ ಸಿಗುತ್ತಿಲ್ಲ.