ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಮದುವೆ ವಿಚಾರ ಸಂಬಂಧ ಕೊನೆಗೂ ಸ್ಪಷ್ಟನೆ ಸಿಕ್ಕಿದೆ. ಈ ಸಂಬಂಧ ಸ್ವತಃ ನಟಿಯೇ ಪೋಸ್ಟ್ ಹಾಕುವ ಮೂಲಕ ಮದುವೆಯಾಗಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಈ ಸಂಬಂಧ ಇನ್ ಸ್ಟಾದಲ್ಲಿ ಸುದೀರ್ಘ ಪತ್ರ ಬರೆದಿರುವ ಪೋಸ್ಟ್ ನ್ನು ನಟಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಮೇ 30ರಂದು ಮದುವೆಯಾಗಿರುವ ವಿಚಾರವನ್ನು ಈ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆದರೆ ಮದುವೆಗೆ ನಿಮ್ಮನ್ನು ಆಮಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಳ್ಳುವ ಮೂಲಕ ಪ್ರಣೀತಾ ಕ್ಷಮೆ ಕೇಳಿದ್ದಾರೆ.
ಪೋಸ್ಟ್ ನಲ್ಲೇನಿದೆ..?
2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದೇವೆ. ಈ ಸಂತಸದ ವಿಚಾರವನ್ನು ಇದೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನು ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಲ್ಲದೆ ಮದುವೆಗೆ ಒಂದು ದಿನ ಮುಂಚೆಯಷ್ಟೇ ದಿನ ನಿಗದಿ ಮಾಡಿರುವುದಾಗಿದೆ.
ಕೊರೊನಾ ವೈರಸ್ ನಿಂದಾಗಿ ಕೆಲವೊಂದು ನಿಯಮಗಳನ್ನು ಕೂಡ ನಾವು ಫಾಲೋ ಮಾಡಬೇಕಾಗುತ್ತದೆ. ಮದುವೆಯ ದಿನಾಂಕ ಕೂಡ ಅರ್ಜೆಂಟಾಗಿ ನಿಗದಿಯಾಗಿದ್ದರಿಂದ ನಿಮ್ಮನ್ನು ಮದುವೆಗೆ ಕರೆಯಲು ಸಾಧ್ಯವಾಗಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ ಎಂದು ಪ್ರಣೀತಾ ಬರೆದುಕೊಂಡಿದ್ದಾರೆ.
View this post on Instagram
ವೈರಲಾದ ಮದಯವೆ ವಿಚಾರ:
ಪ್ರಣೀತಾ ಸುಭಾಷ್ ಅವರು ನಿತಿನ್ ರಾಜು ಜೊತೆ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ವಧು-ವರರ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು. ಸ್ನೇಹಿತರೊಬ್ಬರು ನೂತನ ವಧು-ವರರ ಜೊತೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಪ್ರಣೀತಾ ಮದುವೆಯಾಗಿರುವ ಸುದ್ದಿ ಬೆಳಕಿಗೆ ಬಂದಿತ್ತು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟಿ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿರುವ ಪ್ರಣೀತಾ ಪತಿ ನಿತಿನ್, ಮಾಲ್‍ವೊಂದರ ಓನರ್ ಎಂಬುದು ಸದ್ಯದ ಮಾಹಿತಿ.
ಮೂಲಗಳ ಪ್ರಕಾರ ನಟಿ ಮದುವೆಯಲ್ಲಿ ತುಂಬಾ ಹತ್ತಿರದ ಸಂಬಂಧಿಕರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. ಅಲ್ಲದೆ ಪ್ರಣೀತಾ ದಂಪತಿ ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದರು. ಆದರೆ ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಮದುವೆ ಸಮಾರಂಭಗಳಿಗೆ ಇಂತಿಷ್ಟೇ ಜನ ಸೇರಬೇಕೆಂಬ ನಿಯಮ ತರಲಾಗಿದೆ. ಹೀಗಾಗಿ ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ಪ್ರಣೀತಾ ಮದುವೆ ನಡೆದಿದೆ ಎಂಬ ಮಾಹಿತಿ ಲಭಿಸಿತ್ತು.