ಮುಂಬೈ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹೊಸ ಸಂಕಷ್ಟಲ್ಲಿ ಸಿಲುಕಿದ್ದು, ಮನೆ ಖಾಲಿ ಮಾಡುವಂತೆ ನೆರೆಹೊರೆಯವರು ಒತ್ತಡ ಹಾಕಿದ್ದಾರೆ ಎಂದು ವರದಿಯಾಗಿದೆ. ರಿಯಾ ಪೋಷರು ಹೊಸ ಫ್ಲ್ಯಾಟ್ ಹುಡುಕಾಟದಲ್ಲಿದ್ದಾರೆ. ಇತ್ತ ರಿಯಾ ಸಹ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲು ಹೊಸ ಮನೆ ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.
ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ ಮತ್ತು ತಾಯಿ ಸಂಧ್ಯಾ ಚಕ್ರವರ್ತಿ ಮನೆ ಹುಡುಕುತ್ತಿರುವ ವೀಡಿಯೋ ವೈರಲ್ ಆಗಿದೆ. ಸದ್ಯ ರಿಯಾ ಚಕ್ರವರ್ತಿ ಸಂತಾಕ್ರೂಸ್ ನಲ್ಲಿಯ ಸೊಸೈಟಿಯೊಂದರಲ್ಲಿ ವಾಸವಾಗಿದ್ದು, ಕೆಲವೇ ದಿನಗಳಲ್ಲಿ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಹೆಸರು ಕೇಳಿ ಬಂದಿತ್ತು. ಸೆಪ್ಟೆಂಬರ್ 8ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ರಿಯಾ ಚಕ್ರವರ್ತಿಯನ್ನ ಬಂಧಿಸಿತ್ತು. ಒಂದು ತಿಂಗಳ ಬಳಿಕ ಜಾಮೀನು ಪಡೆದು ರಿಯಾ ಜೈಲಿನಿಂದ ಹೊರ ಬಂದಿದ್ದಾರೆ. ಜೂನ್ ನಿಂದ ಮಾಧ್ಯಮಗಳು, ಪೊಲೀಸರು ಪ್ರತಿದಿನ ಸೊಸೈಟಿ ಮುಂದೆ ಜಮಾಯಿಸಿದ್ದರಿಂದ ಇತರ ನಿವಾಸಿಗಳಿಗೆ ತೊಂದರೆ ಆಗಿತ್ತು. ಹಾಗಾಗಿ ಸೊಸೈಟಿ ನಿವಾಸಿಗಳು ರಿಯಾ ಕುಟುಂಬಕ್ಕೆ ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ ನಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದ ರಿಯಾ ಚಕ್ರವರ್ತಿ ತಮ್ಮ ನಿವಾಸದ ಮುಂಭಾಗದಲ್ಲಿ ಜನ ಸೇರಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಪೊಲೀಸ್ ರಕ್ಷಣೆ ಕೇಳಿದ್ದರು. ಜೈಲಿನಿಂದ ಹೊರ ಬಂದರು ಕೆಲವರು ಕ್ಯಾಮೆರಾ ಹಿಡಿದು ಹಿಂಬಾಲಿಸುತ್ತಿದ್ದಾರೆ.