ಮತ್ತೆ WHO ಎಡವಟ್ಟು – ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಗೆ ಅನುಮತಿ

Public TV
3 Min Read
hydroxychloroquine computer

ಜಿನಿವಾ: ಆರಂಭದಲ್ಲಿ ಚೀನಾ ಮಾತನ್ನು ನಂಬಿ ಕೋವಿಡ್ 19 ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ವಿಚಾರದಲ್ಲಿ ಎಡವಟ್ಟು ಮಾಡಿ ಮತ್ತೆ ವಿಜ್ಞಾನಿಗಳು ಮತ್ತು ವೈದ್ಯರ ಕೆಂಗಣ್ಣಿಗೆ ಗುರಿಯಾಗಿದೆ.

ಕೋವಿಡ್ 19ಗೆ ಔಷಧಿ ಪತ್ತೆಯಾಗದ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್(ಎಚ್‍ಸಿಕ್ಯೂ) ಬಳಕೆ ಮಾಡಲಾಗುತ್ತಿತ್ತು. ಈ ಮಧ್ಯೆ ನಿಯತಕಾಲಿಕೆಯಯಲ್ಲಿ ಪ್ರಕಟವಾದ ಅಧ್ಯಯನದ ಆಧಾರದಲ್ಲಿ ಡಬ್ಲ್ಯೂಎಚ್‍ಒ ಹೈಡ್ರಾಕ್ಸಿಕ್ಲೋರೋಕ್ವಿನ್ ವೈದ್ಯಕೀಯ ಪ್ರಯೋಗಕ್ಕೆ(ಕ್ಲಿನಿಕಲ್ ಟ್ರಯಲ್) ತಾತ್ಕಾಲಿಕ ತಡೆ ನೀಡಿತ್ತು. ಆದರೆ ಈಗ ಅಧ್ಯಯನದಲ್ಲಿ ತಪ್ಪುಗಳು ಇರುವುದು ಗಮನಕ್ಕೆ ಬರುತ್ತಿದ್ದಂತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಹೇಳಿದೆ.

WHO Corona

ತಡೆ ನೀಡಿದ್ದು ಯಾಕೆ?
ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ಕೋವಿಡ್ ಗುಣವಾಗುವ ಬದಲು ಸಾವು ಸಂಭವಿಸಬಹುದು. ಈ ಮಾತ್ರೆಯಿಂದ ಕೋವಿಡ್ ರೋಗಿಗಳಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂಬ ಅಧ್ಯಯನ ವರದಿಯೊಂದು ಇತ್ತೀಚೆಗೆ `ದಿ ಲಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿತ್ತು. ಮೇ 22ರಂದು ಪ್ರಕಟವಾದ ಈ ಅಧ್ಯಯನವನ್ನು ಗಂಭೀರವಾಗಿ ಸ್ವೀಕರಿಸಿದ ಡಬ್ಲ್ಯೂಎಚ್‍ಒ ಮೇ 25ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ವೈದ್ಯಕೀಯ ಪ್ರಯೋಗಕ್ಕೆ ತಾತ್ಕಾಲಿಕ ತಡೆ ನೀಡಿತ್ತು.

ಈ ಹಿಂದಿನ ವರದಿ ಏನಿತ್ತು?
ಈ ಹಿಂದೆ ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ Sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿತ್ತು. ಕೋವಿಡ್19 ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿತ್ತು. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ಮಾತ್ರೆಯನ್ನು ರಫ್ತು ಮಾಡಿತ್ತು. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು – ಟ್ರಂಪ್ ಈ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ?

ತಡೆ ನೀಡಿದ ಬಳಿಕ ಏನಾಯ್ತು?
ಡಬ್ಲ್ಯೂಎಚ್‍ಒ ಎಚ್‍ಸಿಕ್ಯೂ ಪ್ರಯೋಗಕ್ಕೆ ತಡೆ ನೀಡಿದ ಬೆನ್ನಲ್ಲೇ ‘ದಿ ಲಾನೆಟ್ಸ್’ ನಲ್ಲಿ ಪ್ರಕಟವಾದ ಅಧ್ಯಯನದ ಬಗ್ಗೆ ಅನುಮಾನ ಎದ್ದಿತ್ತು. ಏಪ್ರಿಲ್ 14ರ ಸಮಯದಲ್ಲಿ 6 ಖಂಡಗಳ 671 ಆಸ್ಪತ್ರೆಗಳಲ್ಲಿರುವ 96 ಸಾವಿರ ರೋಗಿಗಳಿಗೆ ನೀಡಿದ ಚಿಕಿತ್ಸೆಯನ್ನು ಆಧಾರಿಸಿ ಅಧ್ಯಯನ ಮಾಡಿತ್ತು. ಈ ವರದಿಯಲ್ಲಿ ಏಪ್ರಿಲ್ 21ರ ವೇಳೆಗೆ ಎಚ್‍ಸಿಕ್ಯೂ ಸೇವಿಸಿದ್ದ 10,698 ರೋಗಿಗಳು ಮೃತಪಟ್ಟಿದ್ದಾರೆ ಎಂದು ಮೇ 22 ರಂದು ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಿತ್ತು.

ಇಷ್ಟೊಂದು ಮಾಹಿತಿಗಳನ್ನು ಪಡೆದು ಕೇವಲ 5 ವಾರದಲ್ಲಿ ಸಂಶೋಧನಾ ವರದಿ ತಯಾರಿಸಲು ಸಾಧ್ಯವಿಲ್ಲ. ಯಾವ ಆಸ್ಪತ್ರೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ? ಈ ಬಗ್ಗೆ ಖಚಿತ ಮಾಹಿತಿಯನ್ನು ನೀಡಿ ಎಂದು ವಿಶ್ವದ ನೂರಕ್ಕೂ ಹೆಚ್ಚು ವಿಜ್ಞಾನಿಗಳು ‘ಲಾನ್ಸೆಟ್’ ನಿಯತಕಾಲಿಕೆಗೆ ಖಾರವಾದ ಪತ್ರ ಬರೆದು ಬರೆದು ಕೇಳಿಕೊಂಡಿದ್ದರು.

ಯಾವುದೇ ವೈಜ್ಞಾನಿಕ ಅಧ್ಯಯನಗಳನ್ನು ಪ್ರಕಟಿಸಿದರೆ, ಆ ಅಧ್ಯಯನಕ್ಕೆ ಪರಿಗಣಿಸಿದ ಎಲ್ಲ ಅಂಶಗಳನ್ನು ಸಾರ್ವಜನಿಕವಾಗಿ ನೀಡಬೇಕಾಗುತ್ತದೆ. ಅದರಲ್ಲೂ ವಿಶ್ವದಲ್ಲಿ ತಲ್ಲಣ ಮೂಡಿಸಿದ ಕೋವಿಡ್ ಬಗ್ಗೆ ಅಧ್ಯಯನ ನಡೆಸಿದ ಡೇಟಾಗಳನ್ನು ನೋಡಲು ವಿಜ್ಞಾನಿಗಳು ಆಸಕ್ತಿಯಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಡೇಟಾಗಳನ್ನು ನೀಡದೇ ವರದಿಯನ್ನು ನಂಬುವುದು ಸರಿಯಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆಸ್ಟ್ರೇಲಿಯಾದ 5 ಆಸ್ಪತ್ರೆಗಳ 600 ರೋಗಿಗಳ ಪೈಕಿ ಏಪ್ರಿಲ್ 21 ರಂದು 73 ರೋಗಿಗಳು ಮೃತಪಟ್ಟಿದ್ದರು ಎಂದು ಅಧ್ಯಯನ ಹೇಳಿತ್ತು. ಆದರೆ ವಿಶ್ವದೆಲ್ಲೆಡೆ ಕೋವಿಡ್ ಪ್ರಕರಣ ಮತ್ತು ಸಾವಿನ ಲೆಕ್ಕ ತಿಳಿಯಲು ಭೇಟಿ ನೀಡುವ ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಡೇಟಾ ಪ್ರಕಾರ ಆಸ್ಟ್ರೇಲಿಯಾದಲ್ಲಿ ಏಪ್ರಿಲ್ 23ರ ವೇಳೆಗೆ ಕೇವಲ 67 ಮಂದಿ ಮೃತಪಟ್ಟಿದ್ದರು ಎಂದು ಹೇಳಿತ್ತು. ಈ ಕಾರಣಕ್ಕೆ ಅಧ್ಯಯನಕ್ಕೆ ಯಾವೆಲ್ಲ ಮಾನದಂಡವನ್ನು ಪರಿಗಣಿಸಲಾಗಿದೆ ಎಂಬ ಬಗ್ಗೆ ಗಂಭೀರವಾದ ಪ್ರಶ್ನೆಯನ್ನು ಎತ್ತಲಾಗಿತ್ತು.

Hydroxychloroquine tablets 1

ತಪ್ಪು ಮಾಹಿತಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿಜ್ಞಾನಿಗಳು, ಉದ್ದೇಶಪೂರ್ವಕವಾಗಿ ಎಚ್‍ಸಿಕ್ಯೂ ಬಳಕೆ ಮಾಡಬಾರದು ಎನ್ನುವ ಕಾರಣಕ್ಕೆ ಈ ಅಧ್ಯಯನ ಮಾಡಿರಬಹುದು ಅಥವಾ ತಪ್ಪು ಮಾಹಿತಿಗಳನ್ನು ಪಡೆದು ಈ ಅಧ್ಯಯನ ನಡೆಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಜ್ಞಾನಿಗಳಿಂದ ಆಕ್ಷೇಪಗಳು ಏಳುತ್ತಿದ್ದಂತೆ ಡಬ್ಲ್ಯೂಎಚ್‍ಒ ಈಗ ಎಚ್‍ಸಿಕ್ಯೂಬಳಕೆಗೆ ಅನುಮತಿ ನೀಡಿದೆ.

who corona 1

Share This Article
Leave a Comment

Leave a Reply

Your email address will not be published. Required fields are marked *