ಮತ್ತೆ ಮತ್ತೆ ಮೊಳಗಿ ಮರಳು ಮಾಡಿದ ಉಪ್ಪಿಯ ‘ಓಂ’ಕಾರ!

Public TV
2 Min Read
UPENDRA 1

ದೇ ತಿಂಗಳ 18ರಂದು ‘ಓಂ’ ಚಿತ್ರ ತೆರೆಗಂಡು 25 ವರ್ಷವಾಗುತ್ತದೆ. ಈ ಸಂಭ್ರಮವನ್ನು ಅರ್ಥವತ್ತಾಗಿ ಆಚರಿಸಲು ಶಿವರಾಜ್‍ಕುಮಾರ್ ಅಭಿಮಾನಿ ಬಳಗ ಶಿವಸೈನ್ಯ ಸನ್ನದ್ಧಗೊಂಡಿದೆ. ಕೊರೊನಾ ಕಾಟದ ನಡುವೆಯೂ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಚಿತ್ರರಂಗವೇ ಇದನ್ನೊಂದು ಹೊಸ ಹುಟ್ಟಿನ ನೆನಪನ್ನು ಮತ್ತೆ ಸ್ಮರಿಸುವಂತಹ ಪುಳಕದೊಂದಿಗೆ ಒಂದಿಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಹೊತ್ತಿನಲ್ಲಿ ಓಂ ಚಿತ್ರದ ಬಗ್ಗೆ ಒಂದಷ್ಟು ದಾಖಲಾರ್ಹವಾದ ವಿಚಾರಗಳನ್ನು ಮತ್ತೆ ಮನನ ಮಾಡಿಕೊಳ್ಳುವ ಕಾರ್ಯವೂ ವ್ಯಾಪಕವಾಗಿಯೇ ನಡೆಯುತ್ತಿದೆ.

OM

ಭೂಗತ ಜೀವಿಗಳ ಕಥೆಯನ್ನು, ಪ್ರೇಮವೂ ಸೇರಿದಂತೆ ನಾನಾ ಅಂಶಗಳೊಂದಿಗೆ ನಿರೂಪಿಸಿದ್ದ ಚಿತ್ರ ಓಂ. ಆ ಕಾಲದ ಮಟ್ಟಿಗೆ ಮಾತ್ರವಲ್ಲ, ಈ ಕ್ಷಣಕ್ಕೂ ಓಂ ವಿಶೇಷ ಚಿತ್ರವಾಗಿಯೇ ಈ ತಲೆಮಾರಿನ ಸಮುದಾಯವನ್ನೂ ಆವರಿಸಿಕೊಂಡಿದೆ. 90ರ ದಶಕದಲ್ಲಿ ಬೆಂಗಳೂರು ಭೂಗತವನ್ನಾಳುತ್ತಿದ್ದ ನಿಜವಾದ ರೌಡಿಗಳ ಕಥೆಯಾಧಾರಿತವಾದ ಈ ಚಿತ್ರದಲ್ಲಿ ರಿಯಲ್ ರೌಡಿಗಳ ದಂಡೇ ನಟಿಸಿತ್ತು. ಉಪ್ಪಿ ಅಂದರೆ, ಸಿನಿಮಾದಲ್ಲಿಯೂ ಕಟು ವಾಸ್ತವವನ್ನು ಒರೆಗೆ ಹಚ್ಚಬಲ್ಲ ವ್ಯಕ್ತಿತ್ವದವರು. ಅದೇ ಮನಸ್ಥಿತಿಯಲ್ಲಿ ರೂಪುಗೊಂಡಿದ್ದ ಓಂ ಮತ್ತೆ ಮತ್ತೆ ಬಿಡುಗಡೆಯಾಗುತ್ತಾ, ಅದೇ ಖದರ್‍ನಲ್ಲಿ ಪ್ರದರ್ಶನಗೊಳ್ಳುತ್ತಾ ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿದೆ.

Om Upendra A

ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು ಪ್ರೇಮಾ ನಟನೆಯ ಓಂ ಹಲವಾರು ದಾಖಲೆಗಳಿಗೆ ಓಂಕಾರ ಬರೆದ ಮಾಸ್ಟರ್ ಪೀಸ್‍ನಂತಹ ಚಿತ್ರ. ಕಥೆ, ಚಿತ್ರಕಥೆಗಳಿಂದ ಮೊದಲ್ಗೊಂಡು ಸಂಗೀತ, ಹಿನ್ನೆಲೆ ಸಂಗೀತದ ವರೆಗೆ ಪ್ರತಿಯೊಂದು ವಿಚಾರದಲ್ಲಿಯೂ ಅದು ಪಕ್ಕಾ ಮಾಸ್ಟರ್ ಪೀಸ್. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 600ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆಯಾದ ದಾಖಲೆ ಹೊಂದಿರೋ ಚಿತ್ರ ಯಾವುದಾದರೂ ಇದ್ದೀತೆಂದರೆ ಅದು ಓಂ ಮಾತ್ರ. ಹಾಗೆ ಪದೇ ಪದೆ ಬಿಡುಗಡೆಯಾಗೋದು, ಹೌಸ್‍ಫುಲ್ ಪ್ರದರ್ಶನಗೊಳ್ಳೋದಂದರೇನು ಸಾಮಾನ್ಯದ ಸಂಗತಿಯಲ್ಲ. ಓಂ ವಿಚಾರದಲ್ಲಿ ಸಲೀಸಾಗಿಯೇ ಸಾಧ್ಯವಾಗುತ್ತಾ ಬಂದಿದೆ.

Om Upendra B

ಮಾರ್ಚ್ 2015 ರಂದು ಓಂ ಅತ್ಯಾಧುನಿಕ ಡಿಟಿಎಸ್ ತಂತ್ರಜ್ಞಾನದಿಂದ ಲಕಲಕಿಸುತ್ತಾ ಮತ್ತೆ ಬಿಡುಗಡೆಯಾಗಿತ್ತು. ಅದು ಬಹುಶಃ ಈ ಚಿತ್ರದ 632ನೇ ಯಶಸ್ವೀ ಪ್ರದರ್ಶನ. ಪ್ರತೀ ಸಲ ಮರು ಬಿಡುಗಡೆಯಾದಾಗಲೂ ಓಂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ದಾಖಲೆ ಮಾಡುತ್ತಲೇ ಬಂದಿದೆ. ವಿಶೇಷವೆಂದರೆ ಈ ತಲೆಮಾರಿನ ಹುಡುಗರೂ ಕೂಡ ಅತ್ಯುತ್ಸಾಹದಿಂದ ಓಂ ಅನ್ನು ನೋಡಿ ಬೆಂಬಲಿಸುತ್ತಿದ್ದಾರೆ. ಅದು ಈ ಸಿನಿಮಾ ಅದೆಷ್ಟು ಮುಂದಾಲೋಚನೆಯಿಂದ ತಯಾರುಗೊಂಡಿದೆ ಅನ್ನೋದಕ್ಕೆ ಸೂಕ್ತ ಸಾಕ್ಷಿಯಂತಹ ಬೆಳವಣಿಗೆ. ಅಂದಹಾಗೆ, ಡಿಟಿಎಸ್ ತಂತ್ರಜ್ಞಾನದಿಂದ ಹೊಸ ಸ್ವರೂಪ ಪಡೆದುಕೊಂಡಿದ್ದ ಓಂ ನಾನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡಿತ್ತು. ಇಂತಹ ದಾಖಲೆಗಳ ಹಾದಿಗೆ ಇದೇ ತಿಂಗಳ 18ರಂದು ಭರ್ತಿ 15 ವರ್ಷ ತುಂಬುತ್ತದೆ.

Share This Article
Leave a Comment

Leave a Reply

Your email address will not be published. Required fields are marked *