ಬೆಂಗಳೂರು: ಮತ್ತೆ ಮರು ಬಿಡುಗಡೆಯಾಗಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಟಗರು ಸಿನಿಮಾ ನೋಡಲು ಭಾನುವಾರ ಸಲಗ ಚಿತ್ರದ ನಾಯಕ ದುನಿಯ ವಿಜಯ್ ಅವರು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ.
ಕೊರೊನಾ ಕಾರಣದಿಂದ ಪ್ರದರ್ಶನಗಳನ್ನು ನಿಲ್ಲಿಸಿದ್ದ ಚಿತ್ರಮಂದಿರಗಳು ಸರ್ಕಾರದ ಆದೇಶದಂತೆ ಮತ್ತೆ ಚಿತ್ರಪ್ರದರ್ಶನ ಶುರು ಮಾಡಿವೆ. ಈ ಹಿಂದೆ ಹಿಟ್ ಆಗಿದ್ದ ಕೆಲ ಸಿನಿಮಾಗಳು ಮತ್ತೆ ಮರು ಬಿಡುಗಡೆಯಾಗುತ್ತೀವೆ. ಅಂತೆಯೇ 2018ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸೂರಿ ನಿರ್ದೇಶನದ ಟಗರು ಚಿತ್ರ ಹಿಂದಿನಿಂದ ಮತ್ತೆ ತೆರೆಮೇಲೆ ಬರುತ್ತಿದೆ.
https://www.instagram.com/p/CGr3lotgb6T/
ಈ ವಿಚಾರವಾಗಿ ಪೋಸ್ಟ್ ಹಾಕಿರುವ ದುನಿಯಾ ವಿಜಯ್ ಅವರು, ಕಳೆದ ಆರೇಳು ತಿಂಗಳಿನಿಂದ ಕೊರೊನಾ, ಐಸೋಲೇಶನ್, ಕ್ವಾರಂಟೈನ್, ಸೀಲ್‍ಡೌನ್ ಇದೇ ರೀತಿಯ ಪದಗಳನ್ನು ಕೇಳುತ್ತಿದ್ದ ನಮಗೆ ಈಗ ಮಾರ್ನಿಂಗ್ ಶೋ, ಮ್ಯಾಟ್ನಿ, ಲೇಟ್ ನೈಟ್ ಶೋ ಎಂಬ ಪದಗಳನ್ನು ಕೇಳುವ ಸಮಯ ಬಂದಿದೆ. ಕೊರೊನಾಗೆ ವ್ಯಾಕ್ಸಿನ್ ಇನ್ನೂ ಬಂದಿಲ್ಲ. ಆದರೆ ಜೀವನವೂ ನಡೆಯಬೇಕಿರುವುದರಿಂದ ಎಲ್ಲ ಉದ್ಯಮಗಳಂತೆ, ಕಳೆದೊಂದು ವಾರದಿಂದ ಸರ್ಕಾರದ ನಿಯಮಗಳನ್ನು ಪಾಲಿಸುತ್ತಲೇ ನಮ್ಮ ಕನಸಿನ ಮನೆಗಳಾದ ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿವೆ ಎಂದಿದ್ದಾರೆ.
ಜೊತೆಗೆ ಭಯ ಆತಂಕ ಎಲ್ಲದರ ನಡುವೆಯೂ ಒಂದಷ್ಟು ಸಿನಿಮಾ ಪ್ರೇಮಿಗಳು ಥೀಯೇಟರ್‍ಗೆ ಬಂದು ಸಿನಿಮಾ ನೋಡಿದ್ದಾರೆ. ಅವರೆಲ್ಲರಿಗೂ ನನ್ನ ಮನಃಪೂರ್ವಕ ವಂದನೆಗಳು. ನನ್ನ `ಸಲಗ’ ಸಿನಿಮಾದ ನಿರ್ಮಾಪಕರಾದ ಕೆಪಿ ಶ್ರೀಕಾಂತ್ ನಿರ್ಮಾಣದ ಗೆಳೆಯ ಸೂರಿ ನಿರ್ದೇಶನದ ಚಿತ್ರರಂಗದ ನಾಯಕ, ನನ್ನ ಪಾಲಿಗೆ ಅಣ್ಣನ ಸಮಾನರಾದ ಶಿವರಾಜ್‍ಕುಮಾರ್ ಗೆಳೆಯ ಡಾಲಿ ಧನಂಜಯ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ `ಟಗರು’ ಇಂದಿನಿಂದ ಮರು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಿತ್ರ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯನ್ನು ದೋಚಲಿ ಎಂದು ಹಾರೈಸುತ್ತಾ ಭಾನುವಾರ ಅಂದರೆ ಅಕ್ಟೋಬರ್ 25ರ ಮಧ್ಯಾಹ್ನ 1.15ರ ಪ್ರದರ್ಶನಕ್ಕೆ ಅಭಿಮಾನಿಗಳ ಜತೆ ಸಿನಿಮಾ ನೋಡಲು ಮೈಸೂರು ರಸ್ತೆಯಲ್ಲಿರುವ ಸಿರ್ಸಿ ಸರ್ಕಲ್ ಬಳಿಯ ಗೋಪಾಲನ್ ಸಿನಿಮಾಸ್‍ಗೆ ಬರುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದುಕೊಂಡು ಸಿನಿಮಾ ನೋಡಲು ಆರಂಭಿಸೋಣ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಖುಷಿ ಮತ್ತು ಸಂತೋಷವನ್ನು ಅನುಭವಿಸೋಣ ಎಂದು ಹೇಳಿದ್ದಾರೆ.