ಮಡಿಕೇರಿ ದಸರಾ: ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ಚಾಲನೆ

Public TV
1 Min Read
Madikeri Dasara 1

ಮಡಿಕೇರಿ: ಐತಿಹಾಸಿಕ ಹಿನ್ನೆಲೆಯ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ‘ಕರಗ ಉತ್ಸವ’ಕ್ಕೆ ಮಂಜಿನ ನಗರಿ ಮಡಿಕೇರಿ ನಗರದ ಪಂಪಿನ ಕೆರೆಯ ಬನ್ನಿಮಂಟಪದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಇಂದು ಸಂಜೆ ಚಾಲನೆ ನೀಡಲಾಯಿತು.

ಮಡಿಕೇರಿ ನಗರ ದಸರಾ ಸಮಿತಿ, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಂಡಿತು. ಮಡಿಕೇರಿ ನಗರ ನಾಲ್ಕು ಶಕ್ತಿ ದೇವತೆಗಳದ ರಾಜಾಸೀಟು ಬಳಿಯ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ, ನಗರಸಭೆ ಬಳಿಯ ಶ್ರೀ ದಂಡಿನ ಮಾರಿಯಮ್ಮ, ಪೆನ್ಶನ್ ಲೇನ್‍ನ ಶ್ರೀ ಕೋಟೆ ಮಾರಿಯಮ್ಮ ಕರಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.

Madikeri Dasara 3

ಮಧ್ಯಾಹ್ನ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದ ವ್ರತಧಾರಿಗಳು ಹಾಗೂ ದೇವಾಲಯ ಸಮಿತಿಯ ಪ್ರಮುಖರು ಕರಗ ಅಲಂಕಾರಕ್ಕೆ ಅಗತ್ಯವಿರುವ ಫಲ, ಪುಷ್ಪಗಳೊಂದಿಗೆ ಪಂಪಿನ ಕೆರೆಗೆ ತೆರಳಿದರು. ವಿವಿಧ ಪೂಜಾ, ಕೈಂಕರ್ಯಗಳ ಮೂಲಕ ಕರಗಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಗಣ್ಯರು ಪೂಜೆಯಲ್ಲಿ ಭಾಗಿಯಾಗಿದ್ದರು.

Madikeri Dasara 2

ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಪೂಜೆ ಸ್ವೀಕರಿಸಿದವು. ಸಂಪ್ರದಾಯದಂತೆ ಪೇಟೆ ಶ್ರೀರಾಮಮಂದಿರಕ್ಕೆ ತೆರಳಿದ ಕರಗಗಳು ಅಲ್ಲಿಯೂ ವಿಶೇಷ ಪೂಜೆ ಸ್ವೀಕರಿಸಿ ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ಕೊರೊನಾ ವೈರಸ್ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಡಳಿತ ಸರಳ ದಸರಾಗೆ ಮುಂದಾಗಿದ್ದು, ಕರಗ ಮಹೋತ್ಸವವನ್ನು ಈ ಬಾರಿ ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ.

ಜಿಲ್ಲಾಡಳಿತದ ನಿರ್ಧಾರಕ್ಕೆ ದಸರಾ ಸಮಿತಿಯವರು ಸಹ ಸಮ್ಮತಿಸಿದ್ದಾರೆ. ಹೀಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡಿ, ವಿಜೃಂಭಣೆಯಿಂದ ನಡೆಸಲಾಗುತ್ತಿದ್ದ ಮಂಜಿನನಗರಿ ಮಡಿಕೇರಿಯ ದಸರಾ ಈ ಬಾರಿ ನಿರಾಡಂಬರವಾಗಿ ನಡೆಯಲಿದೆ.

MDK DASARA 1

Share This Article