ಶಿವಮೊಗ್ಗ: ವಿವಾಹ ಆಮಂತ್ರಣ ಪತ್ರಿಕೆಯನ್ನು ಹಲವರು ಹಲವು ರೀತಿಯಲ್ಲಿ ವಿಭಿನ್ನವಾಗಿ ಮಾಡಿಸುತ್ತಾರೆ. ವಿವಿಧ ಶೈಲಿಯ ಆಮಂತ್ರಣ ಪತ್ರಿಕೆಗಳನ್ನು ನಾವು ಮಾರುಕಟ್ಟೆಯಲ್ಲಿ ನೋಡಿರುತ್ತೇವೆ ಸಹ. ಆದರೆ ಇಲ್ಲೊಬ್ಬರು ತಮ್ಮ ಮಗಳ ಮದುವೆಗೆ ಸುಮಾರು 300 ಪುಟಗಳ ಆಮಂತ್ರಣ ಪುಸ್ತಕವನ್ನು ನೀಡಿದ್ದಾರೆ.
Advertisement
ಶಿವಮೊಗ್ಗದ ಪಂಚಾಕ್ಷರಪ್ಪ ತಮ್ಮ ಪುತ್ರಿ ಶಿವಾಲಿ ಮತ್ತು ವರ ಧರಣೇಶ್ ಅವರ ವಿವಾಹಕ್ಕೆ ವಿಶಿಷ್ಟ ಆಮಂತ್ರಣ ಪತ್ರಿಕೆ ಮಾಡಿಸಿದ್ದು, ಸುಮಾರು 300ಕ್ಕೂ ಹೆಚ್ಚು ಪುಟಗಳನ್ನು ತಾವೇ ಬರೆದು, ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ವಿವಾಹವೆಂಬ ಅಪೂರ್ವ ಸಂದರ್ಭಕ್ಕೆ ಬಂಧು ಬಳಗದವರು, ಸ್ನೇಹಿತರು, ಹಿತೈಷಿಗಳು ಭಾಗಿಯಾಗಬೇಕೆಂಬ ಸದುದ್ದೇಶದಿಂದ ವಿವಾಹದ ಆಹ್ವಾನ ಪತ್ರಿಕೆಯನ್ನು ನೀಡಲಾಗುತ್ತದೆ. ಆದರೆ ಈ ಆಹ್ವಾನ ಪತ್ರಿಕೆಗಳನ್ನು ಹಲವರು ಹಲವು ರೀತಿಯಲ್ಲಿ ತಯಾರಿಸುತ್ತಾರೆ. ಆದರೆ ಪುಟಗಳ ಸಂಖ್ಯೆ ತೀರಾ ವಿರಳ.
Advertisement
Advertisement
‘ವಿವಾಹ ಸಂಗಮ’ ಎಂಬ 112 ಪುಟಗಳ ಆಹ್ವಾನ ಪುಸ್ತಕ ಪ್ರಕಟಿಸಿದ್ದು, ಇದರ ಜೊತೆಗೆ ಪ್ರೀತಿ ಮಾಡುವರಿಗಾಗಿ ತಿಳುವಳಿಕೆ ನೀಡಲು ‘ಪ್ರೇಮಾಂಜಲಿ’ ಎಂಬ 208 ಪುಟಗಳ ಹೊತ್ತಿಗೆ ಕೂಡ ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲ ಈ ಎರಡೂ ಪುಸ್ತಕಗಳ ಜೊತೆಗೆ ನಿಶ್ಚಿತಾರ್ಥದ ವಿಷಯಗಳನ್ನು ಒಳಗೊಂಡ ಸಿಡಿ ಕೂಡ ನೀಡಲಾಗಿದೆ. ಸುಮಾರು 300 ಪುಟಗಳ ಎರಡೂ ಪುಸ್ತಕಗಳನ್ನು ಆರ್ಟ್ ಪೇಪರ್ ನಲ್ಲಿ, ಅದರಲ್ಲೂ ಬಹುವರ್ಣದಲ್ಲಿ ಮುದ್ರಿಸಲಾಗಿದೆ. ವಿವಾಹಕ್ಕೆ ಬರುವವರಿಗೆ ಈ ಮೂರನ್ನೂ ಉಡುಗೊರೆಯಾಗಿ ನೀಡುವ ನಿಶ್ಚಯ ಮಾಡಿಕೊಂಡಿದ್ದಾರೆ.
Advertisement
ಈ ಹಿಂದೆ ತಮ್ಮ ಮನೆಯ ಗೃಹ ಪ್ರವೇಶವನ್ನು ಮೂರು ಹಂತದಲ್ಲಿ ಮಾಡಿ, 500 ಪುಟಗಳ ಪುಸ್ತಕ ಹೊರತಂದು, ದಾಖಲೆ ಮಾಡಿದ್ದ ಪಂಚಾಕ್ಷರಪ್ಪ ಇದೀಗ ತಮ್ಮ ಮಗಳ ಮದುವೆಗೂ 2 ಪುಸ್ತಕಗಳನ್ನು ಮುದ್ರಿಸಿ ದಾಖಲೆ ಮಾಡಿದ್ದಾರೆ. ಈ ವಿವಾಹ ಸಂಗಮ ಪುಸ್ತಕದಲ್ಲಿ 676 ಲೇಖನಗಳನ್ನು ಪಂಚರಂಗಿ ಎಂಬ ಕಾವ್ಯನಾಮದಿಂದ ತಾವೇ ಬರೆದು ಸೈ ಎನಿಸಿಕೊಂಡಿದ್ದಾರೆ. ಇದರಲ್ಲಿ ವಿಭಿನ್ನ ವಿವಾಹಗಳು, ವಿವಾಹ ಸಂಸ್ಕೃತಿಯ ದಿಕ್ಕು, ಶರೀರ ಮನಸ್ಸುಗಳ ಮಿಲನತೆ, ಸಪ್ತಪದಿ, ಪ್ರಸ್ಥ ಹೀಗೆ ವಧುವರರಿಗೆ ಸಲಹೆ ನೀಡಬಹುದಾದ ಲೇಖನಗಳನ್ನು ತಾವೇ ಬರೆದಿರುವುದು ವಿಶೇಷ.
ವೃತ್ತಿಯಲ್ಲಿ ವ್ಯಾಪಾರಿ ಆಗಿರುವ ಪಂಚಾಕ್ಷರಪ್ಪ, ಕೇವಲ ವ್ಯಾಪಾರಿಯಾಗದೇ ಆಮಂತ್ರಣ ಪುಸ್ತಕಗಳನ್ನು ಬರೆಯುವ ಮೂಲಕ ತಾವೊಬ್ಬ ಪ್ರಬುದ್ಧ ಬರಹಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಮಗಳು ಶಿವಾಲಿ ಮತ್ತು ವರ ಧರಣೇಶ್ ಅವರ ವಿವಾಹಕ್ಕಾಗಿ ರಚಿತವಾದ ಈ ಪುಸ್ತಕ ವಿನೂತನ ಚಿಂತನೆಯ ಅಪರೂಪದ ಸಂಗ್ರಹವಾಗಿದೆ. ಇದು ಎಲ್ಲರೂ ಓದಲೇ ಬೇಕಾದಂತಹ ಕೃತಿಯಾಗಿದ್ದು, ಇದೊಂದು ಮೌನ ದನಿಯ ಪ್ರತೀಯ ಉಡುಗೊರೆಯಾಗಿಯೂ ಈ ಕೃತಿ ಹಲವಾರು ದೃಷ್ಟಿಯಲ್ಲಿ ವಿಶೇಷತೆಯನ್ನೂ ಪಡೆದಿದೆ. ಇದನ್ನು ಓದಿದುಗರು ಸಹ ಮೆಚ್ಚಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ವಿವಾಹಕ್ಕೆ ಬಂದವರು ಊಟ-ನೋಟ, ಗಂಡು-ಹೆಣ್ಣು ಚೆನ್ನಾಗಿದೆ ಎಂದು ಹೇಳಿ ಮನೆಗೆ ಹೋಗಿ ಮರೆಯುತ್ತಾರೆ. ಆದರೆ ಅವರಿಗೆ ಸಾಹಿತ್ಯದ ಬಗ್ಗೆ, ಓದಿನ ಬಗ್ಗೆ ಅರಿವು ಮೂಡಿಸಲೆಂದೇ ಪಂಚಾಕ್ಷರಪ್ಪ ಅವರು ಇಂತಹ ಕೃತಿ ಹೊರತಂದು ತಮ್ಮ ಮಗಳ ಮದುವೆಯನ್ನು ಸಾರ್ಥಕಗೊಳಿಸಿದ್ದಾರೆ.