ನವದೆಹಲಿ: ಮಗನಿಗೆ ಮಕ್ಕಳು ಇಲ್ಲವೆಂದು ಮನನೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಈ ಘಟನೆ ದೆಹಲಿಯ ಸಿರಸ್ಪುರ್ ಪ್ರದೇಶದಲ್ಲಿ ನಡೆದಿದೆ. ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೃತ ದಂಪತಿಯನ್ನು 50 ವರ್ಷ ಹಾಗೂ 48 ವರ್ಷದವರು ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಆಲಿಪುರದ ಗೋಡೌನ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಮದುವೆಯಾಗಿ 9 ವರ್ಷಗಳ ನಂತರವೂ ತಮ್ಮ ಮಗನಿಗೆ ಮಗು ಇಲ್ಲದ ಕಾರಣ ದಂಪತಿ ಖಿನ್ನತೆಗೆ ಒಳಗಾಗಿದ್ದರು ಎಂಬುದಾಗಿ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆರೋಗ್ಯ ಸಮಸ್ಯೆಯಿಂದಾಗಿ ಮಗನಿಗೆ ಮಗು ಆಗಿರಲಿಲ್ಲ ಎನ್ನಲಾಗಿದೆ.
ಮಗು ಇಲ್ಲದ ಕಾರಣ ದಂಪತಿ ಆಗಾಗ ತಮ್ಮ ಮಗನೊಂದಿಗೆ ಜಗಳವಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ದಂಪತಿಗೆ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದು, ಅದೇ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.
ಭಾನುವಾರ ಮಧ್ಯಾಹ್ನ ಮಗನ ಪತ್ನಿ ಅತ್ತೆ-ಮಾವ ಇದ್ದ ಮನೆಗೆ ಹೋಗಿ ನೋಡಿದಾಗ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡಿದ್ದಾರೆ. ದಂಪತಿ ವಿಷ ಸೇವಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು ಬದುಕುಳಿಸಲು ಸಾಧ್ಯವಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಗೌರವ್ ಶರ್ಮಾ ವಿವರಿಸಿದ್ದಾರೆ.