ಭೋಪಾಲ್: ಆಫೀಸರ್ ಮಾಡುವ ಆಸೆಯಿಂದ ತಂದೆಯೋರ್ವ 105 ಕಿಮೀ ಸೈಕಲ್ ತುಳಿದು ತನ್ನ ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬುಡಕಟ್ಟು ಕಾರ್ಮಿಕರಾದ ಶೋಭರಂ, ಮಗನನ್ನು ಕೂರಿಸಿಕೊಂಡು 105 ಕಿಮೀ ಸೈಕಲ್ ತುಳಿದಿದ್ದಾರೆ. ರಾಜ್ಯ ರಾಜಧಾನಿ ಭೋಪಾಲ್‍ನಿಂದ 251 ಕಿ.ಮೀ ದೂರದಲ್ಲಿರುವ ಮನವಾರ್ ತಹಸಿಲ್‍ನ ಬಯಾಡಿಪುರದ ತಮ್ಮ ಹಳ್ಳಿಯಿಂದ 105 ಕಿ.ಮೀ ದೂರದಿಲ್ಲಿರುವ ಭೋಜ್ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಶೋಭರಂ, ನಮ್ಮ ಊರಿನಲ್ಲಿ ಬಸ್ಸುಗಳು ಕಾರ್ಯನಿರ್ವಹಿಸುತ್ತಿಲ್ಲ. ನಮ್ಮ ಹಳ್ಳಿಯಲ್ಲಿ ನನಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಆದ್ದರಿಂದ ನಾನು ನನ್ನ ಸೈಕಲ್‍ನಲ್ಲಿ ಇಲ್ಲಿಗೆ ಬರಲು ನಿರ್ಧರಿಸಿದೆ. ಭಾನುವಾರ ಧಾರ್‍ನಿಂದ ಹೊರಟು ಮನವಾರ್ ಪಟ್ಟಣದಲ್ಲಿ ರಾತ್ರಿ ತಂಗಿದ್ದೆವು. ಮಂಗಳವಾರ ಮುಂಜಾನೆ 4 ಗಂಟೆಗೆ ಮಾಂಡುಗೆ ಬಂದು ಪರೀಕ್ಷೆಗೆ 15 ಸೆಕೆಂಡ್ ಇರುವಾಗ ಪರೀಕ್ಷಾ ಕೇಂದ್ರವನ್ನು ತಲುಪಿದೆ ಎಂದು ಹೇಳಿದ್ದಾರೆ.
ಆಗಸ್ಟ್ 24ರಂದು ಮಗನ ಪರೀಕ್ಷೆಗಳು ಮುಗಿಯುವವರೆಗೂ ಶೋಭರಂ ಇದೇ ಜಿಲ್ಲೆಯಲ್ಲಿ ಇರಲು ನಿರ್ಧರಿಸಿದ್ದಾರೆ. ಆಹಾರವನ್ನು ತಯಾರಿಸಲು ಶೋಭರಂ, ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಗೋಣಿ ಚೀಲದಲ್ಲಿ ತಂದಿದ್ದಾರೆ. ಶಿಕ್ಷಕರ ಅನುಪಸ್ಥಿತಿ ನನ್ನ ಮಗ ಸರಿಯಾಗಿ ಓದದೆ ಮೂರು ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಇಲ್ಲಿ ಬಂದು ಮತ್ತೆ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ಶೋಭರಂ ತಿಳಿಸಿದ್ದಾರೆ.
ಕಾರ್ಮಿಕನ ಮಗ ಮಧ್ಯಪ್ರದೇಶ ಸರ್ಕಾರದ ರುಕ್ ಜನ ನಹಿ ಯೋಜನೆ ಅಡಿಯಲ್ಲಿ ಪರೀಕ್ಷೆಗಳನ್ನು ಬರೆಯುತ್ತಿದ್ದಾನೆ. ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತೊಂದು ಅವಕಾಶವನ್ನು ಸರ್ಕಾರ ಇಲ್ಲಿ ನೀಡಿದೆ.