-ನೂತನ ಸಚಿವರಿಗೆ ಶುಭ ಕೋರಿದ ಸವದಿ
ಚಿಕ್ಕೋಡಿ: ಮಂತ್ರಿ ಆಗಿರುವದಕ್ಕೆ ನನಗೆ ಬೇಸರವಾಗಿಲ್ಲ ಎಂದು ಹೇಳಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೂತನ ಸಚಿವ ಸಂಪುಟಕ್ಕೆ ಶುಭ ಕೋರಿದ್ದಾರೆ.
ಸಂಪುಟ ರಚನೆಯ ಬಳಿಕ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟದಿಂದ ಕೈ ಬಿಟ್ಟ ಬಗ್ಗೆ ಬೆಂಬಲಿಗರಲ್ಲಿನ ಪ್ರತಿಭಟನೆ ಮತ್ತು ಆಗ್ರಹಗಳು, ಅಭಿಮಾನಿಗಳು ಮತ್ತು ಅವರವರ ಮುಖಂಡರ ನಡುವಿನ ಸಂಬಂಧದ ಅನುಗುಣವಾಗಿ ಇರುತ್ತದೆ. ಸೋತಂತಹ ವ್ಯಕ್ತಿಯನ್ನು ಡಿಸಿಎಂ ಮಾಡಿದ್ದಾರೆ ಸಚಿವನನ್ನಾಗಿ ಮಾಡಿದ್ದಾರೆ. ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಉತ್ತಮ ಅವಕಾಶಗಳನ್ನು ನನಗೆ ಕೊಟ್ಟಿದ್ದಾರೆ. ಕೆಲವೊಮ್ಮೆ ಮತ್ತೊಬ್ಬರಿಗೆ ಅವಕಾಶ ಕೊಡುವುದಕ್ಕಾಗಿ ಅವಧಿ ಆಧಾರಿತ ಖಾತೆ ಹಂಚಿಕೆಯನ್ನು ಪಕ್ಷದ ವರಿಷ್ಟರು ಮಾಡಿದ್ದಾರೆ. ರಾಜ್ಯದ ಸಚಿವ ಸಂಪುಟದಲ್ಲಿ 33 ಖಾತೆಗಳಿವೆ, ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಆದರೆ ಆಸೆ ಎಲ್ಲ 224 ಜನರಿಗೂ ಇರುತ್ತದೆ. ಮಂತ್ರಿ ಆಗದೇ ಇರುವದಕ್ಕೆ ನನಗೆ ಯಾವುದೇ ಬೇಜಾರಿಲ್ಲ ಎಂದಿದ್ದಾರೆ.
ಉತ್ತರ ಕರ್ನಾಟಕದವರು ನನ್ನ ಆತ್ಮೀಯರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂಬ ಆಶಯವಿದೆ. ಉಳಿದ ಇಪ್ಪತ್ತು ತಿಂಗಳಲ್ಲಿ ಉತ್ತಮ ಯೋಜನೆಗಳನ್ನು ಕೊಡಲಿದ್ದೇವೆ. ಕೊರೊನಾ ಮಹಾಮಾರಿ, ಪ್ರವಾಹ ಸೇರಿದಂತೆ ಹಲವು ಕಂಟಕಗಳಿಂದ ಸ್ವಲ್ಪ ಕೆಲಸಗಳು ವಿಳಂಬವಾಗಿವೆ. ಈ ಬಾರಿಯ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಖಾತೆಗಳನ್ನು ಬ್ಯಾಲೆನ್ಸ್ ಆಗಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಜನರಿಗೆ ಒಳ್ಳೆಯ ಖಾತೆ ಕೊಟ್ಟು ಬ್ಯಾಲೆನ್ಸ್ ಮಾಡಿ ಜಾಣತನ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2023ರ ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ನಾವೆಲ್ಲ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತವೆ. ಆದ್ದರಿಂದ ನಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರು ಯಾವುದೇ ರೀತಿ ಧೃತಿಗೆಡಬಾರದು. ನಾನು ನನ್ನ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆ ಮತ್ತು ಪ್ರತಿಭಟನೆ ಮಾಡದೇ ಪಕ್ಷ ಸಂಘಟನೆಗೆ ಒತ್ತು ಕೊಡಲು ಕೈ ಜೋಡಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಿಲ್ಲಾ ಪ್ರವಾಸ ರದ್ದು – ಪ್ರವಾಹ ಪೀಡಿತ ಸ್ಥಳಗಳನ್ನ ಪರಿಶೀಲಿಸದೇ ಬೆಂಗಳೂರಿಗೆ ಮರಳಿದ ವಿ.ಸೋಮಣ್ಣ