– ರಾಯಚೂರಿನ ಬಹುತೇಕ ದೇವಾಲಯಗಳಲ್ಲಿ ದರ್ಶನ ಭಾಗ್ಯ
ರಾಯಚೂರು: 75 ದಿನಗಳ ಬಳಿಕ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ರಾಯಚೂರಿನಲ್ಲಿ ದೇವಾಲಯಗಳಲ್ಲಿ ಪ್ರವೇಶ ಮುಕ್ತವಾಗಿದ್ದರೂ ಭಕ್ತರ ಸಂಖ್ಯೆ ಅತ್ಯಂತ ವಿರಳವಾಗಿದೆ. ಇತ್ತ ಮಂತ್ರಾಲಯದಲ್ಲಿ ಅಗತ್ಯ ಸಿದ್ಧತೆಯ ಕೊರತೆ ಹಿನ್ನೆಲೆ ಮಠ ಮಹಾದ್ವಾರವನ್ನ ತೆರೆದಿಲ್ಲ.
ಮಂತ್ರಾಲಯ ಮಠದ ಮಹಾದ್ವಾರವನ್ನು ತೆರೆಯದೆ ಇರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಭಾಗ್ಯ ಇಂದು ಭಕ್ತರಿಗೆ ಸಿಕ್ಕಿಲ್ಲ. ಕೇಂದ್ರ ಹಾಗೂ ಆಂಧ್ರ ಸರ್ಕಾರದ ಸೂಚನೆ ಹಿನ್ನೆಲೆ ಇಂದಿನಿಂದ ದರ್ಶನಕ್ಕೆ ಮುಕ್ತವಾಗಬೇಕಿತ್ತು. ಆದರೆ ಬಾಗಿಲು ತೆರೆಯದೆ ಇರುವುದು ಭಕ್ತರಲ್ಲಿ ನಿರಾಸೆ ಮೂಡಿಸಿದೆ.
Advertisement
Advertisement
ಮಂತ್ರಾಲಯ ಮಠದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಮಾತ್ರ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹೊರರಾಜ್ಯ ಹಾಗೂ ಬೇರೆ ಜಿಲ್ಲೆಯ ಭಕ್ತರಿಗೆ ಜೂನ್ 15ರ ನಂತರ ರಾಯರ ದರ್ಶನಕ್ಕೆ ಅವಕಾಶ ಎಂದು ಹೇಳಲಾಗಿತ್ತು. ಆದರೆ ಮಂತ್ರಾಲಯದಲ್ಲಿ ದರ್ಶನಕ್ಕೆ ಪೂರ್ವ ತಯಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಂದು ರಾಯರ ಮಠದ ಬಾಗಿಲು ತೆಗೆಯಲಿಲ್ಲ.
Advertisement
ರಾಯರ ವೃಂದಾವನ ದರ್ಶನಕ್ಕೆ ಬಂದವರಿಗೆ ದರ್ಶನ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಭಕ್ತರು ಹೊರಗಡೆಯಿಂದಲೇ ರಾಯರಿಗೆ ನಮಿಸಿ ಮರಳುತ್ತಿದ್ದಾರೆ. ಮಠದ ಆಡಳಿತ ಮಂಡಳಿಯ ಸಭೆಯ ನಂತರ ಬಾಗಿಲು ತೆಗೆಯುವ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಮಠದ ಮೂಲಗಳು ಹೇಳಿವೆ.
Advertisement
ರಾಯಚೂರು ನಗರದ ಚಂದ್ರಮೌಳೇಶ್ವರ ದೇವಾಲಯ, ನಂದೀಶ್ವರ ದೇವಾಲಯ, ದೇವಸುಗೂರಿನ ಸೂಗುರೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲೂ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಹರಕೆ, ಪ್ರಸಾದ ವಿತರಣೆಗೆ ಅವಕಾಶ ನೀಡಿಲ್ಲ. ಪೂಜೆ, ಅಭಿಷೇಕಗಳು ಮೊದಲಿನಂತೆ ನಡೆಯುತ್ತಿವೆ.
ದೇವಾಲಯಗಳಲ್ಲಿ ಸಾಮಾಜಿಕ ಅಂತರದ ಮಾರ್ಕ್ ಮಾಡಲಾಗಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ದೇವಾಲಯಕ್ಕೆ ಬರುವ ಕೆಲ ಭಕ್ತರು ಮಾಸ್ಕ್ ಧರಿಸದೇ ನೇರವಾಗಿ ಬರುತ್ತಿದ್ದಾರೆ. ದೇವಾಲಯದಲ್ಲಿ ಒಳಬರುವವರಿಗೆ ಹಾಗೂ ಹೊರ ಹೋಗುವವರಿಗೆ ಪ್ರತ್ಯೇಕ ವ್ಯವಸ್ಥೆಯಿದೆ. ಹೀಗಿದ್ದರೂ ಬಹಳಷ್ಟು ದೇವಾಲಯಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯಿಲ್ಲ. ಭಕ್ತರ ಸಂಖ್ಯೆ ಕಡಿಮೆಯಿದ್ದು ದೇವಾಲಯಗಳು ಇನ್ನೂ ಸಿದ್ಧತೆಗಳನ್ನ ನಡೆಸಿವೆ.