– ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಯುವತಿ
– ಜೆರಾಕ್ಸ್ ಪ್ರತಿಯಿಂದ ಸಾವಿನ ಸತ್ಯ ಬೆಳಕಿಗೆ
ಮಂಡ್ಯ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮಗಳು ವರ್ಷ ಕಳೆಯುತ್ತಿದ್ದಂತೆ ಪೋಷಕರ ಸಂಪರ್ಕ ಕಡಿದುಕೊಂಡಿದ್ದಳು. ಪ್ರೀತಿಸಿದವನ ಜೊತೆ ಚೆನ್ನಾಗಿದ್ದಾಳೆ ಎಂದುಕೊಂಡಿದ್ದ ತಂದೆ-ತಾಯಿಗೆ ದೊಡ್ಡ ಅಘಾತ ಎದುರಾಗಿದ್ದು, ಐದು ವರ್ಷಗಳ ಹಿಂದೆಯೇ ಮಗಳು ಸಾವನ್ನಪ್ಪಿದ್ದಾಳೆ ಎಂಬ ಸತ್ಯ ಪೋಷಕರಿಗೆ ಅಘಾತವನ್ನು ಉಂಟು ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
Advertisement
ಐದು ವರ್ಷಗಳ ಬಳಿಕ ಮನೆಯಲ್ಲಿ ಸಿಕ್ಕ ಜೆರಾಕ್ಸ್ ಪ್ರತಿ ಮಗಳ ನಿಗೂಢ ಸಾವಿನ ಸತ್ಯವನ್ನು ಪೋಷಕರಿಗೆ ತಿಳಿಸಿದೆ. ಪ್ರರಕರಣ ಈಗ ಮಹಿಳಾ ಆಯೋಗ ಹಾಗೂ ಪೊಲೀಸ್ ಇಲಾಖೆ ಮೆಟ್ಟಿಲೇರಿದ್ದು, ಮಗಳ ಕಳೆದುಕೊಂಡ ಪೋಷಕರು ಮರ್ಯಾದೆಗಾಗಿ ಹತ್ಯೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ.
Advertisement
ಏನಿದು ಪ್ರಕರಣ: ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹದೇವಮ್ಮ ಮಗಳ ಕಳೆದುಕೊಂಡು ಕಣ್ಣೀರುತ್ತಿದ್ದಾರೆ. ಹೊಟ್ಟೆ, ಬಟ್ಟೆಗಾಗಿ ಊರು ಬಿಟ್ಟು ಬೆಂಗಳೂರಲ್ಲೇ ಜೀವನ ಸಾಗುತ್ತಿದ್ದ ಇವರು, ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಕಷ್ಟ ಪಟ್ಟು ದುಡಿದ ದುಡ್ಡಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಆಸೆ ಹೊಂದಿದ್ದರು. ಅದಕ್ಕಾಗಿಯೇ ತನ್ನ 2ನೇ ಮಗಳು ಮೇಘಶ್ರೀಯನ್ನು ಬೊಮ್ಮನಹಳ್ಳಿಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಗೂ ಸೇರಿಸಿದ್ದರು.
Advertisement
Advertisement
ಆದರೆ 2014-15ರಲ್ಲಿ ಮೇಘಶ್ರೀಗೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಸ್ವಾಮಿಗೌಡ ಎಂಬಾತನ ಪರಿಚಯವಾಗಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಕೂಡ ಮನೆ ಬಿಟ್ಟು ಮದುವೆಯಾಗಿದ್ದರು. ಮದುವೆ ಬಳಿಕ ಸ್ವಾಮಿಗೌಡ ಮತ್ತು ಮೇಘಶ್ರೀ ಇಬ್ಬರೂ ಬೆಂಗಳೂರಿನಲ್ಲೇ ವಾಸವಿದ್ದರು. ಮದುವೆ ಆದ ಒಂದು ವರ್ಷ ಮೇಘಶ್ರೀ ತನ್ನ ತಾಯಿ ಜೊತೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದಳು . ಆನಂತರ ದಿಢೀರ್ ಅಂತಾ ಮೇಘಶ್ರೀ ಫೋನ್ ಮಾಡುವುದನ್ನು ನಿಲ್ಲಿಸಿದ್ದಳು.
ಅಲ್ಲಿಂದ ಇಲ್ಲಿಯವರೆಗೂ ಮಹದೇವಮ್ಮ ಮಗಳ ಫೋಟೋ ಹಿಡಿದು ಇಡೀ ಬೆಂಗಳೂರು ಅಲೆದಾಡಿದ್ದರು. ಆದರೆ ಕೆಲದಿನಗಳ ಹಿಂದೆ ಮನೆ ಕ್ಲೀನ್ ಮಾಡುವ ವೇಳೆ, ಮೇಘಶ್ರೀ ಇಟ್ಟಿದ್ದ ತಾನು ಮದುವೆಯಾಗಿರುವ ಯುವಕನ ವೋಡರ್ ಐಡಿ ಜೆರಾಕ್ಸ್ ಪತ್ತೆಯಾಗಿತ್ತು. ಜೆರಾಕ್ಸ್ ಪ್ರತಿಯಲ್ಲಿದ್ದ ಆತನ ವಿಳಾಸ ಹಿಡಿದುಕೊಂಡು ಮಹದೇವಮ್ಮ ಮಗಳನ್ನು ಹುಡುಕಲು ಪಾಂಡವಪುರಕ್ಕೆ ತೆರಳಿದ್ದರು. ಆದರೆ ಗ್ರಾಮಕ್ಕೆ ತೆರಳಿದ್ದ ಅವರಿಗೆ ಬಿಗ್ ಶಾಕ್ ಎದುರಾಗಿತ್ತು.
ಹುಡುಗನ ಮನೆಗೆ ಹೋಗಿ ನನ್ನ ಮಗಳೆಲ್ಲಿ ಎಂದ ತಾಯಿಗೆ ನಿನ್ನ ಮಗಳು 5 ವರ್ಷಗಳ ಹಿಂದೆಯೇ ನಾಪತ್ತೆಯಾಗಿದ್ದಾಳೆ ಎಂಬ ಉತ್ತರ ಸಿಕ್ಕಿತ್ತು. ಆದರೆ ಸ್ಥಳೀಯರು ಮೇಘಶ್ರೀ ತಾಯಿ ಮಹದೇವಮ್ಮಗೆ ಬೇರೆಯದ್ದೇ ಸತ್ಯ ಹೇಳಿದರಂತೆ. ಮದುವೆ ಬಳಿಕ ಮನೆಗೆ ಬಂದ ಮೇಘಶ್ರೀ ಜೊತೆಗೆ ಜಾತಿ ವಿಚಾರವಾಗಿ ಸ್ವಾಮಿ ಗೌಡನ ತಂದೆ ಜಗಳ ತೆಗೆದಿದ್ದರಂತೆ. ಅಂದು ನಡೆದ ಜಗಳ ವಿಕೋಪಕ್ಕೆ ತಿರುಗಿ ಮೇಘಶ್ರೀ ಹತ್ಯೆಯಾಯಿತು ಎಂಬ ವಿಚಾರವನ್ನು ಸ್ಥಳೀಯರು ತಿಳಿಸಿದ್ದರು.
ಈ ಮಾಹಿತಿ ಪಡೆದಿರುವ ಮೇಘಶ್ರೀ ಪೋಷಕರು, ಮಾನವ ಹಕ್ಕುಗಳ ಆಯೋಗದ ಸಹಾಯದ ಪಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಪ್ರಕರಣದ ಮಾಹಿತಿ ಪಡೆದ ಪೊಲೀಸರು 2015 ರಲ್ಲಿ ತಮ್ಮ ಠಾಣೆಯ ವ್ಯಾಪ್ತಿಯ ನಾಲೆಯಲ್ಲಿ ಸಿಕ್ಕ ಅಪರಿಚಿತ ಮಹಿಳೆಯ ಮೃತದೇಹದ ಫೋಟೋ ತೋರಿಸಿದ್ದರು. ಆ ಚಿತ್ರ ನೋಡಿದ ತಾಯಿ ಇದು ನನ್ನ ಮಗಳ ಮೃತದೇಹವೇ ಎಂದು ಗುರುತಿಸಿದ್ದರು. ಸ್ವಾಮಿಗೌಡನ ಮನೆಯವರು ಮರ್ಯಾದೆಗಾಗಿ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರು, ಮಹಿಳಾ ಆಯೋಗದ ಅಧ್ಯಕ್ಷರು, ಮಾನವ ಹಕ್ಕುಗಳ ರಕ್ಷಣಾ ಫೋರಂ ಮೊರೆ ಹೋಗಿದ್ದಾರೆ.
ಐದು ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ಮತ್ತೆ ಜೀವ ಬಂದಿದ್ದು, ಪೊಲೀಸರ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ.