ಮಂಡ್ಯ: ಬಾಲಕಿಯನ್ನು ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಾಸುವ ಮುನ್ನವೇ ಇದೀಗ ವೃದ್ಧ ಕಾಮುಕನೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ.
ಹೌದು. 61 ವರ್ಷದ ವೃದ್ಧನೊಬ್ಬ 15 ವರ್ಷದ ಬಾಲಕಿ ಮೇಲೆ ಕಾಮದೃಷ್ಟಿ ಬೀರಿದ್ದಾನೆ. ಆರೋಪಿಯನ್ನು ಮಂಡ್ಯದ ಗಾಂಧಿನಗರ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದ್ದು, ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಪಕ್ಕದ ಮನೆಯ ಬಾಲಕಿ ಶಾಲೆಗೆ ರಜೆ ಇದ್ದುದರಿಂದ ಮನೆಯಲ್ಲಿಯೇ ಇದ್ದಳು. ಇದನ್ನೇ ಉಪಯೋಗಿಸಿಕೊಂಡ ಕಾಮುಕ ವೃದ್ಧ, ಆಕೆಯ ಪೋಷಕರು ಕೆಲಸಕ್ಕೆ ತೆರಳಿದ್ದಾಗ ದೌರ್ಜನ್ಯವೆಸಗಿದ್ದಾನೆ. ಅಲ್ಲದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಕೂಡ ಹಾಕಿದ್ದಾನೆ.
ಇತ್ತ ಪಕ್ಕದ ಮನೆ ತಾತ ಕೆಟ್ಟ ದೃಷ್ಟಿಯಿಂದ ನೋಡುವುದು, ಮೈಕೈ ಮುಟ್ಟುತ್ತಾರೆ ಎಂದು ಬಾಲಕಿ ತನ್ನ ಪೋಷಕರ ಬಳಿ ಹೇಳಿದ್ದಾಳೆ. ಆದರೆ ಹೆತ್ತವರು ಮಾತ್ರ ಬಾಲಕಿಯ ಮಾತನ್ನು ನಿರ್ಲಕ್ಷ್ಯಿಸಿದ್ದಾರೆ. ಅಲ್ಲದೆ ಅವರು ಹಿರಿಯರು, ಬಾಲಕಿಯೇ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆಂದು ಸುಮ್ಮನಾಗಿದ್ದರು. ಇದೀಗ ಬಾಲಕಿ ಗರ್ಭಿಣಿಯಾಗಿದ್ದನ್ನು ಅರಿತ ಪೋಷಕರು ಮಂಡ್ಯ ಪಶ್ಚಿಮ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಕಾಮುಕ ವೃದ್ಧನನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಿವಾಸಿಯಾಗಿದ್ದು, ಕುಟುಂಬಸ್ಥರ ಜೊತೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗ್ರಾಮಕ್ಕೆ ಬಂದಿದ್ದಳು. ಬುಧವಾರ ಕಬ್ಬು ಕಟಾವಿಗೆ ಬಾಲಕಿ ಗದ್ದೆಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನ ಎಳೆದೊಯ್ದ ಕಾಮುಕ ಕಿರಾತಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದು ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಿದ್ದರು.