ಮಂಗಳೂರಿಗರು ಆಹಾರ ಪ್ರಿಯರು. ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ತುಪ್ಪದಲ್ಲಿ ಕರಿದ ಚಿಕನ್ ದಕ್ಷಿಣ ಭಾರತದ ಅತ್ಯಂತ ಜನಪ್ರಿಯವಾದ ಖಾದ್ಯವಾಗಿದೆ. ಇಂದು ಭಾನುವಾರ ವಾಗಿರುವುದರಿಂದ ಮಾಂಸ ಪ್ರಿಯರು ಮಾಂಸಹಾರವನ್ನು ಸೇವಿಸಲು ಹೆಚ್ಚಾಗಿ ಬಯಸುತ್ತಾರೆ. ಹೋಟೆಲ್‍ನಲ್ಲಿ ಸಿಗುವ ಬಿರಿಯಾನಿ, ಕಬಾಬ್, ಗ್ರೇವಿಗಳನ್ನು ನೀವು ಮನೆಯಲ್ಲಿ ಮಾಡಲು ಪ್ರಯತ್ನಿಸುತ್ತೀರ. ಆದರೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸ್ಪೆಷಲ್ ಖಾದ್ಯವಾಗಿರುವ ತುಪ್ಪದಲ್ಲಿ ಕರಿದ ಚಿಕನ್ ಕರಿ ಮಾಡಲು ಪ್ರಯತ್ನಿಸಿ.
ತುಪ್ಪದ ಸ್ವಾದವು ಈ ಖಾದ್ಯಕ್ಕೆ ಒಂದು ವಿಶಿಷ್ಟವಾದ ಪರಿಮಳವನ್ನೂ ಹಾಗೂ ರುಚಿಯನ್ನೂ ನೀಡುತ್ತದೆ. ಆದ್ದರಿಂದ ಈ ಚಿಕನ್ ಪದಾರ್ಥವನ್ನು ತಯಾರಿಸುವಾಗ ತುಪ್ಪವನ್ನು ಬಳಸಲು ಜಿಪುಣತನವನ್ನು ತೋರಿಸುವುದು ಬೇಡ. ಅಲ್ಲದೆ ಕುತೂಹಲಕಾರಿ ಅಂಶವೇನೆಂದರೆ, ಈ ಖಾದ್ಯ ತಯಾರಿಕೆಯ ಅವಧಿಯಲ್ಲಿ ನೀರನ್ನು ಸ್ವಲ್ಪವೂ ಕೂಡ ಬಳಸಲಾಗುವುದಿಲ್ಲ ಹಾಗೂ ಕೋಳಿ ಮಾಂಸವು ತುಪ್ಪದಿಂದ ಉತ್ಪನ್ನವಾದ ಹಬೆಯಿಂದ ಬೇಯುತ್ತದೆ.
ಬೇಕಾಗುವ ಸಾಮಗ್ರಿಗಳು:
*ಚಿಕನ್ – ಅರ್ಧ ಕೆಜಿ
*ಕರಿಬೇವಿನ ಸೊಪ್ಪು – ಸ್ವಲ್ಪ
*ಬೆಳ್ಳುಳ್ಳಿ, ಶುಂಠಿಯ ಪೇಸ್ಟ್ – 2 ಟೇಬಲ್ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
*ಸಕ್ಕರೆ – 1 ಟೇಬಲ್ ಸ್ಪೂನ್
*ಮೆಣಸಿನ ಪುಡಿ – 2 ಟೇಬಲ್ ಸ್ಪೂನ್
*ಗರಂ ಮಸಾಲಾ ಪುಡಿ – 1 ಟೇಬಲ್ ಸ್ಪೂನ್
*ಜೀರಿಗೆ ಪುಡಿ – 2 ಟೇಬಲ್ ಸ್ಪೂನ್
*ಕೊತ್ತಂಬರಿ ಪುಡಿ -1 ಟೇಬಲ್ ಸ್ಪೂನ್
*ಮೆಣಸಿನ ಪುಡಿ – 1 ಟೇಬಲ್ ಸ್ಪೂನ್
*ಒಣಗಿರುವ ಕೆ0ಪು ಮೆಣಸು – 2
*ಹುಣಸೆ – 1 ಟೇಬಲ್ ಸ್ಪೂನ್
*ಟೊಮೆಟೊ ಪೇಸ್ಟ್ – 1 ಕಪ್
*ತುಪ್ಪ – 1 ಕಪ್
*ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ:
* ತುಪ್ಪವನ್ನು ತವಾದಲ್ಲಿ ಬಿಸಿ ಮಾಡಿ ಅದಕ್ಕೆ ಕರಿಬೇವಿನ ಸೊಪ್ಪು, ಒಣಗಿರುವ ಮೆಣಸುಗಳು, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿಯ ಮಿಶ್ರಣದ ಪೇಸ್ಟ್ ಇವುಗಳನ್ನು ಸೇರಿಸಿರಿ ಮಧ್ಯಮ ಉರಿಯಲ್ಲಿ ಬಿಸಿಮಾಡಿರಿ.
* ನಂತರ ಟೊಮೇಟೋ ಪೇಸ್ಟ್ ಸೇರಿಸಿ ಮಿಶ್ರಣವನ್ನು ಮೂರರಿಂದ ನಾಲ್ಕು ನಿಮಿಷಗಳವರೆಗೆ ಬೇಯಿಸಿರಿ.
* ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಇವುಗಳನ್ನು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಕಿರಿ. ತುಪ್ಪವು ಮಸಾಲೆಯಿಂದ ಪ್ರತ್ಯೇಕಗೊಳ್ಳುವವರೆಗೆ ಇವುಗಳ ಮಿಶ್ರಣವನ್ನು ಚೆನ್ನಾಗಿ ಬೇಯಿಸಿರಿ.
* ಈಗ ಇದಕ್ಕೆ ಮತ್ತೆರಡು ಚಮಚಗಳಷ್ಟು ತುಪ್ಪ, ಚಿಕನ್, ಉಪ್ಪು, ಗರಂ ಮಸಾಲಾ ಪುಡಿ, ಹಾಗೂ ಕಾಳುಮೆಣಸಿನ ಪುಡಿಗಳನ್ನು ಸೇರಿಸಿರಿ. ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಐದರಿಂದ ಆರು ನಿಮಿಷಗಳ ಕಾಲ ಮಿಶ್ರಣವನ್ನು ಬೇಯಿಸಬೇಕು.
*ಕೊತ್ತಂಬರಿ ಸೊಪ್ಪು,ಹುಣಸೆಹುಳಿಯ ಪೇಸ್ಟ್, ಸಕ್ಕರೆಯನ್ನು ಸೇರಿಸಿರಿ. ತವೆಯನ್ನು ಮುಚ್ಚಿ ಹತ್ತು ನಿಮಿಷಗಳ ಕಾಲ ಬೇಯಿಸಿದರೆ ಮಂಗಳೂರಿನ ಮಾದರಿಯ ಈ ಚಿಕನ್ ಖಾದ್ಯ ಸವಿಯಲು ಸಿದ್ಧವಾಗುತ್ತದೆ.