– ಕಾಲ್ನಡಿಗೆಯಲ್ಲೇ ತಮ್ಮ ರಾಜ್ಯಕ್ಕೆ ಹೊರಟಿದ್ದ ಕಾಮಿರ್ಕರು
– ಶಾಸಕರ ಮನವಿಯಂತೆ ಬಂಟ್ವಾಳದಲ್ಲಿ ನೆಲೆ
ಮಂಗಳೂರು: ಜಿಲ್ಲೆಯಿಂದ ಕಾಲ್ನಡಿಗೆಯಲ್ಲಿ ಜಾರ್ಖಂಡ್‍ಗೆ ಹೊರಟ ಸುಮಾರು 1 ಸಾವಿರಕ್ಕೂ ಮಿಕ್ಕಿ ವಲಸೆ ಕಾರ್ಮಿಕರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಂಟರ ಭವನದಲ್ಲಿ ಆಶ್ರಯ ನೀಡಲಾಗಿದೆ. ಸೂಕ್ತ ವೈದ್ಯಕೀಯ ತಪಾಸಣೆಯ ಬಳಿಕ ಎರಡು ದಿನಗಳಲ್ಲಿ ಅವರನ್ನು ರೈಲಿನಲ್ಲಿ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಲಾಕ್‍ಡೌನ್‍ನಿಂದ ಮಂಗಳೂರಿನ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜಾರ್ಖಂಡ್ ರಾಜ್ಯದ ಸುಮಾರು 1000ಕ್ಕೂ ಅಧಿಕ ಮಂದಿ ಕಾರ್ಮಿಕರು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಕ್ಕೆ ತೆರಲುವುದಾಗಿ ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಹೊರಟಿದ್ದರು. ಈ ಬಗ್ಗೆ ವಿಷಯ ತಿಳಿದ ಅಧಿಕಾರಿಗಳು ಮಾರ್ಗ ಮಧ್ಯೆ ಕಾರ್ಮಿಕರನ್ನು ತಡೆದು ಮನವೊಲಿಸಲು ಶತ ಪ್ರಯತ್ನ ಪಟ್ಟರೂ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದರು.
Advertisement
Advertisement
ಮಂಗಳೂರು ನಗರದಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಮಕ್ಕಳು, ಮಹಿಳೆಯರು ಹಾಗೂ ತಮ್ಮ ಬಟ್ಟೆಬರೆಗಳನ್ನು ಗಂಟುಮೂಟೆ ಕಟ್ಟಿ ಹೊರಟ ಕಾರ್ಮಿಕರನ್ನು ಮಾರ್ಗ ಮಧ್ಯೆ ವಿವಿಧೆಡೆ ತಡೆದು ನಿಲ್ಲಿಸಿದ ಅಧಿಕಾರಿಗಳು, ಮೂರು ದಿನ ಇಲ್ಲೇ ಇರಿ. ಬಳಿಕ ನಿಮ್ಮನ್ನು ಊರಿಗೆ ತಲುಪಿಸಲು ರೈಲಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡುತ್ತೇವೆ ಎಂದು ಮನವೊಲಿಸಿದರು. ಆದರೆ ಕಾರ್ಮಿಕರು ಯಾರ ಮಾತನ್ನೂ ಲೆಕ್ಕಿಸದೆ ಹೊರಟಿದ್ದರು.
Advertisement
Advertisement
ಕೊನೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಮುಗಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಯ ಗಡಿಯಾದ ಆರ್ಕುಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಆರಂಭದಲ್ಲಿ ಯಾರ ಮಾತಿಗೂ ಜಗ್ಗದ ಕಾರ್ಮಿಕರು ಕೊನೆಗೆ ಬ್ರಹ್ಮರಕೊಟ್ಲು ಟೋಲ್‍ಗೇಟ್ ಸಮೀಪದಲ್ಲಿರುವ ಬಂಟರ ಭವನದಲ್ಲಿ ಉಳಿದುಕೊಳ್ಳಲು ಅಧಿಕಾರಿಗಳು ಮಾಡಿದ ಮನವಿಗೆ ತಲೆಯಾಡಿಸಿದರು.
ಸುದ್ದಿ ತಿಳಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸಂಪರ್ಕಿಸಿ ಬಂಟ್ವಾಳ ಬಂಟರ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಯಿತು. ಸ್ಥಳಕ್ಕೆ ಮಧ್ಯರಾತ್ರಿ ವೇದವ್ಯಾಸ ಕಾಮತ್ ಅವರಿಂದ ಊಟದ ವ್ಯವಸ್ಥೆ ಕಲ್ಪಿಸಿದರೆ, ಬುಧವಾರದಿಂದ ಎಲ್ಲರಿಗೂ ಊಟ, ಉಪಾಹಾರದ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವೈಯಕ್ತಿಕ ನೆಲೆಯಲ್ಲಿ ಒದಗಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಆಗಮಿಸಿದ ಅಷ್ಟೂ ಕಾರ್ಮಿಕರಿಗೆ ಅಭಯ ನೀಡಿ, ಅವರಿಗೆ ವೈದ್ಯಕೀಯ ತಪಾಸಣೆ, ದಾಖಲೆ ಪರಿಶೀಲಿಸಿ, ಪ್ರತ್ಯೇಕ ತಂಡಗಳನ್ನಾಗಿ ಬೇರ್ಪಡಿಸಿ, ರೈಲಿನಲ್ಲಿ ಕಳುಹಿಸುವ ವ್ಯವಸ್ಥೆ ಕೈಗೊಂಡಿದ್ದಾರೆ.