– ಎಂಜಿನಿಯರಿಂಗ್ ಮುಗಿಸಿ, ಅಮೆರಿಕದಲ್ಲಿ ಕೆಲಸ
– ಸಂಬಂಧಿಕರನ್ನ ಭೇಟಿ ಮಾಡಿ ಬರುವಾಗ ದುರಂತ
ಹೈದರಾಬಾದ್: ಸೆಲ್ಫಿ ಕ್ಕಿಕ್ಕಿಸಿಕೊಳ್ಳುವಾಗ ಆಕಸ್ಮಿಕವಾಗಿ ಅಮೆರಿಕದ ಜಲಪಾತದಲ್ಲಿ ಬಿದ್ದು ಆಂಧ್ರ ಪ್ರದೇಶದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.
ಕಮಲಾ ಮೃತ ಯುವತಿ. ಕಮಲಾ ತನಗೆ ನಿಶ್ಚಿಯವಾಗಿದ್ದ ಹುಡುಗನೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಇಬ್ಬರೂ ಕಾಲು ಜಾರಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಕಮಲಾ ಅಟ್ಲಾಂಟಾದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಳು. ಅವರನ್ನು ಭೇಟಿ ಮಾಡಿದ ನಂತರ ತನ್ನ ಮನೆಗೆ ಹಿಂದಿರುಗುವಾಗ ಭಾವಿ ಪತಿಯ ಜೊತೆ ಬಾಲ್ಡ್ ರಿವರ್ ಫಾಲ್ಸ್‌ಗೆ ಹೋಗಿದ್ದಳು.
ಈ ವೇಳೆ ಇಬ್ಬರು ಫಾಲ್ಸ್ ಮುಂದೆ ಸೆಲ್ಫಿ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಕಮಲಾಳ ಭಾವಿ ಪತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಮಲಾ ಎಲ್ಲೂ ಪತ್ತೆಯಾಗಿಲ್ಲ. ಸ್ವಲ್ಪ ಸಮಯದ ನಂತರ ಕಮಲಾ ಜಲಪಾತದಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ನಂತರ ಸಿಪಿಆರ್ ಸಿಬ್ಬಂದಿ ಆಕೆಯನ್ನು ಮೇಲಕ್ಕೆ ಎತ್ತಿಕೊಂಡು ಬಂದಿದ್ದಾರೆ. ಆದರೆ ಕಮಲಾ ಅಷ್ಟರಲ್ಲಿಯೇ ಮೃತಪಟ್ಟಿದಳು.
ಸದ್ಯಕ್ಕೆ ಕಮಲಾ ಮೃತದೇಹವನ್ನು ಭಾರತಕ್ಕೆ ತೆಗೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಮಗಳ ಸಾವಿನ ಸುದ್ದಿ ತಿಳಿದು ಕಮಲಾ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ನನ್ನ ಮಗಳು ಎಂಜಿನಿಯರಿಂಗ್ ಪದವಿ ಪಡೆದಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ಹೋಗಿದ್ದಳು. ಅಲ್ಲಿಯೇ ಅವಳಿಗೆ ಉದ್ಯೋಗ ಕೂಡ ಸಿಕ್ಕಿತ್ತು ಎಂದು ತಾಯಿ ಕಣ್ಣೀರು ಹಾಕಿದರು.
ಕಮಲಾ ಸಹೋದರಿ ಮದುವೆಯಾಗಿ ಚೆನ್ನೈನಲ್ಲಿ ನೆಲೆಸಿದ್ದಾರೆ. ಕಮಲಾ ಕುಟುಂಬವು ಕೃಷ್ಣ ಜಿಲ್ಲೆಯ ಗುಡ್ಲವಲ್ಲೇರು ಎಂಬಲ್ಲಿ ವಾಸ ಮಾಡುತ್ತಿದ್ದು, ಪದವಿ ಮುಗಿದ ನಂತರ ಕಮಲಾ ಅಮೆರಿಕಾಗೆ ಹೋಗಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.