ಮೈಸೂರು: ಮುಂಗಾರು ಋತು ಚುರುಕು ಪಡೆದುಕೊಂಡಿದ್ದು, ಜಿಲ್ಲೆಯ ಕಬಿನಿ ಜಲಾನಯನ ಪ್ರದೇಶದಲ್ಲಿ ಸಹ ಭಾರೀ ಮಳೆ ಆಗುತ್ತಿದೆ. ಇದರಿಂದ ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
ಒಟ್ಟು 2284 ಅಡಿ ಸಾಮಥ್ರ್ಯವನ್ನು ಹೊಂದಿರುವ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2265.60 ಅಡಿಗಳು. ಜಲಾಶಯದ ಇಂದಿನ ಒಳಹರಿವು 6,407 ಕ್ಯೂಸೆಕ್ಸ್, ಜಲಾಶಯದ ಇಂದಿನ ಹೊರಹರಿವು 700 ಕ್ಯೂಸೆಕ್ಸ್. ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಮುಂಗಾರು ಚುರುಕುಗೊಂಡಿದ್ದು, ಕೇರಳದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿರುವುದರಿಂದ ಕಬಿನಿ ನದಿಯಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದೆ. ರಾಜ್ಯದಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದೆ. ಬಿತ್ತನೆ ಕಾರ್ಯ ಸಹ ಅಷ್ಟೇ ಚುರುಕುಗೊಂಡಿದೆ.