ಉಡುಪಿ: ದೇಶಾದ್ಯಂತ ನವರಾತ್ರಿ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನವದುರ್ಗೆಯರ ಆರಾಧನೆಯನ್ನು ಒಬ್ಬೊಬ್ಬ ಭಕ್ತರು ಒಂದೊಂದು ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಉಡುಪಿಯಲ್ಲಿ ದೇವಿಯ ಸೇವೆಯಲ್ಲಿ ನಿರತರಾಗಿದ್ದಾರೆ.
ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಹರಕೆ ಹೊರುತ್ತಾರೆ. ಹಾಗೆಯೇ ಇದೀಗ ವಿಶೇಷ ಎನ್ನುವಂತೆ ತಮಿಳುನಾಡು ಮೂಲದ ರಾಜಶೇಖರ ಎಂಬವರು ದೇವಸ್ಥಾನದಲ್ಲಿ ಭಕ್ತರು ಊಟ ಮಾಡಿದ ಎಲೆಯನ್ನು ಎತ್ತುವುದು ಹಾಗೂ ಭಕ್ತರಿಗೆ ನೀರು, ದೇಗುಲದ ಎಲ್ಲಾ ಚಾಕರಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
Advertisement
Advertisement
ರಾಜಶೇಖರ್ ತಮಿಳುನಾಡಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಪ್ರತಿವರ್ಷ ನವರಾತ್ರಿ ದಿನದಂದು ತಾಯಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಸೇವೆ ಮಾಡುತ್ತಾರೆ. ಧರ್ಮದರ್ಶಿ ಸಚ್ಚಿದಾನಂದ ಚಾತ್ರಾ ಮಾತನಾಡಿ, ದೇವಿಗೆ ಊರಿನವರು ಪರವೂರಿನವರು ವಿವಿಧ ಸೇವೆಗಳನ್ನು ಕೊಡುತ್ತಾರೆ. ತಮಿಳುನಾಡು ಮೂಲದ ವ್ಯಕ್ತಿಯ ಸೇವೆ ಬಹಳ ವಿಶಿಷ್ಟವಾದದ್ದು ದೇವರ ಮುಂದೆ ಭಕ್ತರು ಸಾಮಾನ್ಯರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜಶೇಖರ್, ನಾನು ಕೊಲ್ಲೂರಿಗೆ ಭೇಟಿ ಕೊಟ್ಟ ಸಂದರ್ಭ ಕಮಲಶಿಲೆ ದೇವಸ್ಥಾನದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಮನಸ್ಸಿಗೆ ಬಹಳ ಸಂತೋಷವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಹತ್ತು ದಿನ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನಾನು ಇಲ್ಲೇ ಇದ್ದು ಮಾಡುತ್ತಿದ್ದೇನೆ. ಮೂರು ವರ್ಷಗಳಿಂದ ನಿರಂತರವಾಗಿ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದೇನೆ. ಯಾವುದೇ ಹರಕೆಯನ್ನು ಹೊತ್ತು, ದೇವರ ಮುಂದೆ ಬೇಡಿಕೆಯನ್ನು ಇಟ್ಟು ಕೆಲಸಮಾಡುತ್ತಿಲ್ಲ. ನನ್ನ ಮನಸ್ಸಂತೋಷಕ್ಕಾಗಿ ಆತ್ಮತೃಪ್ತಿಗಾಗಿ ದೇವರ ಸೇವೆ ನಡೆಸುತ್ತಿದ್ದೇನೆ ಎಂದು ಹೇಳಿದರು.