ಉಡುಪಿ: ಎಂತೆಂಥಾ ಕಳ್ಳರನ್ನು ನೋಡಿದ್ದೇವೆ. ಆದರೆ ಉಡುಪಿಯಲ್ಲೊಬ್ಬ ಕಳ್ಳ, ಸಾಕು ನಾಯಿಯನ್ನೇ ಮನೆಯಂಗಳದಿಂದ ಕದ್ದಿದ್ದಾನೆ. ಉಡುಪಿಯ ವೈದ್ಯರೊಬ್ಬರ ಮನೆಯ ಸಾಕು ನಾಯಿಯನ್ನು ಕಳ್ಳನೊಬ್ಬ ಕದ್ದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಡಾಕ್ಟರ್ ಸುರೇಂದ್ರ ಶೆಟ್ಟಿ ಎಂಬವರ ಬನ್ನಂಜೆಯ ಮನೆಯಲ್ಲಿ ಬೆಳಗಿನ ಜಾವ ಈ ಕಳ್ಳತನ ನಡೆದಿದೆ. ಮುಂಜಾನೆ 4.35 ರ ಸುಮಾರಿಗೆ ಎಲ್ಲರೂ ಮಲಗಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಮನೆಯ ಹಿಂಬದಿಯಿಂದ ಒಳಗೆ ನುಗ್ಗಿದ ಕಳ್ಳ, ಬೆಕ್ಕಿನಂತೆ ಹೆಜ್ಜೆ ಇಟ್ಟು ಬಂದು ನಾಯಿಯನ್ನು ಕದ್ದುಕೊಂಡು ಹೋಗಿದ್ದಾನೆ.
ಹೈಬ್ರಿಡ್ ತಳಿಯ ನಾಯಿ ಮನೆ ಮಂದಿಗೆ ಅಚ್ಚು ಮೆಚ್ಚಾಗಿತ್ತು. ಬೆಳಗ್ಗೆ ಎದ್ದಾಗ ನಾಯಿ ಕಾಣದೆ ಇದ್ದಿದ್ದರಿಂದ ಮನೆಯವರು ಸಿಸಿ ಕೆಮರಾ ಚೆಕ್ ಮಾಡಿದ್ದಾರೆ. ಅಲ್ಲಿ ಕಳ್ಳನ ಕರಾಮತ್ತು ಬಯಲಾಗಿದೆ. ಕಳ್ಳ ನಡು ವಯಸ್ಕನಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ನಾಯಿ ಕದ್ದ ಕಳ್ಳನನ್ನು ಹುಡುಕಿಕೊಡಿ ಎಂಬ ಮೆಸೇಜ್ ಉಡುಪಿ ಯಾದ್ಯಂತ ಹರಿದಾಡುತ್ತಿದೆ. ಕಳ್ಳತನ ಸಂದರ್ಭದಲ್ಲಿ ನಾಯಿ ಬೊಗಳಿಲ್ಲ. ಪರಿಚಯಸ್ತರೇ ಇರಬಹುದು ಎನ್ನಲಾಗುತ್ತಿದೆ.