– ವಧುವಿನ ಕುಟುಂಬಸ್ಥರಿಂದ ದೂರು ದಾಖಲು
ಲಕ್ನೋ: ಮದುವೆಯಲ್ಲಿ ಬೈಕ್ ನೀಡದಕ್ಕೆ ಕೋಪಗೊಂಡ ವರ ಮಂಟಪಕ್ಕೆ ಬರದಿರುವ ಘಟನೆ ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಸಿಧಾರಿ ಕ್ಷೇತ್ರದ ಸಮೇಂದಾ ಗ್ರಾಮದಲ್ಲಿ ನಡೆದಿದೆ. ಇದೀಗ ವಧು ಕುಟುಂಬಸ್ಥರು ವರ ಮತ್ತು ಆತನ ಪರಿವಾರದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಂಬೇಡ್ಕರ್ ನಗರದ ಯವಕನ ಮದುವೆ ಎರಡು ದಿನಗಳ ಹಿಂದೆ ನಡೆಯಬೇಕಿತ್ತು. ಮದುವೆಗೆ ಮುನ್ನ ನಡೆದ ಮಾತುಕತೆಯಲ್ಲಿ 1 ಲಕ್ಷದ 30 ಸಾವಿರ ರೂ. ನೀಡಬೇಕೆಂದು ನಿಶ್ಚಯವಾಗಿತ್ತು. ಮದುವೆಗೂ ಮೊದಲು 1 ಲಕ್ಷ ರೂಪಾಯಿ ಮತ್ತು ಆರತಕ್ಷತೆಯ ದಿನದಂದು 30 ಸಾವಿರ ನೀಡುವ ಕುರಿತು ಕರಾರು ಆಗಿತ್ತು. ಒಪ್ಪಂದಂತೆ ವಧುವಿನ ಕುಟುಂಬಸ್ಥರು ಒಂದು ಲಕ್ಷ ರೂಪಾಯಿ ನೀಡಿದ್ದರು.
ಮದುವೆಗೆ ಮೂರು ದಿನ ಇರುವಾಗ ವರನ ಕಡೆಯವರು ಒಂದು ಲಕ್ಷ ರೂ. ಮೌಲ್ಯದ ಬೈಕ್ ಮತ್ತು ಚಿನ್ನದ ಚೈನ್ ಬೇಕೆಂದು ಡಿಮ್ಯಾಂಡ್ ಮಾಡಿದ್ದರು. ಆದ್ರೆ ವಧು ಪಕ್ಷದವರು ಬೈಕ್ ಹಾಗೂ ಚಿನ್ನದ ಚೈನ್ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ನಿಗದಿಯಾಗಿದ್ದ ಮುಹೂರ್ತ ಡಿಸೆಂಬರ್ 11ರಂದು ವಧುವಿನ ಕುಟುಂಬಸ್ಥರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ವರನ ಮೆರವಣಿಗೆ ಬಂದಿಲ್ಲ.
ಕಾದು ಕಾದು ಸುಸ್ತಾದ ಸಂಬಂಧಿಕರು ಡಿಸೆಂಬರ್ 12ರಂದು ವರನ ಮನೆಗೆ ನುಗ್ಗಿದ್ದಾರೆ. ಮದುವೆಗೆಯಾದ ಖರ್ಚು ಮತ್ತು ಮುಂಗಡವಾಗಿ ನೀಡಿದ ಹಣ ನೀಡುವಂತೆ ಆಗ್ರಹಿಸಿದ್ದಾರೆ. ಹಣ ನೀಡಲು ಒಪ್ಪದಿದ್ದಾಗ ವಧುವಿನ ಪಕ್ಷದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.