ಬೆಂಗಳೂರು: ಬಹುಕೋಟಿ ಐಎಂಎ ಹಗರಣ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಭಾನುವಾರ ತಡರಾತ್ರಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದು ಬೆಳಗ್ಗೆ ಸಿಬಿಐನ ಏಳು ಅಧಿಕಾರಿಗಳ ತಂಡ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ನಡೆಸಿದೆ.
ಐಎಂಎ ಕಂಪನಿಯ ಸಂಸ್ಥಾಪಕ ಮನ್ಸೂರ್ ಖಾನ್ ಒತ್ತಡದಿಂದಾಗಿ ಸಿಬಿಐ ಭಾನುವಾರ ಮಾಜಿ ಮಂತ್ರಿ, ಶಿವಾಜಿ ನಗರದ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಬಂಧಿಸಿದೆ. ರೋಷನ್ ಬೇಗ್ ಅವರನ್ನು ಬಂಧಿಸಿದ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ.
ಬಂಧನ ಯಾಕೆ?
ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್ ನೀಡಿ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ. ಇದನ್ನೂ ಓದಿ: ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್
ಈ ನಡುವೆ ಮನ್ಸೂರ್ ಖಾನ್ ನಾನು ರೋಷನ್ ಬೇಗ್ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್ ಬೇಗ್ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್ ಖಾನ್ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮನ್ಸೂರ್ ಖಾನ್ ಒತ್ತಡ – ರೋಷನ್ ಬೇಗ್ ಅರೆಸ್ಟ್, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ರೋಷನ್ ಬೇಗ್ ಅವರಿಗೆ ಮನ್ಸೂರ್ ಖಾನ್ 200 ಕೋಟಿ ಸೇರಿದಂತೆ ಐಷಾರಾಮಿ ಕಾರು, ಉಡುಗೊರೆ ನೀಡಿದ್ದ ಆರೋಪ ಈ ಪ್ರಕರಣ ಬೆಳಕಿಗೆ ಬಂದಾಗಲೇ ಬಂದಿತ್ತು. ಆದರೆ ಈಗ ಮನ್ಸೂರ್ ಖಾನ್ ಒತ್ತಡ ಹಾಕಿದ್ದ ಕಾರಣ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮನೆಗೆ ತೆರಳಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಂಜೆಯ ವೇಳೆ ಬಂಧಿಸಿದೆ.