ಚಾಮರಾಜನಗರ: ಬೆಳೆ ಹಾಳುಮಾಡುತ್ತವೆ ಎಂದು ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಹುತ್ತೂರು ಗ್ರಾಮದಲ್ಲಿ ನಡೆದಿದೆ.
ವಿಷ ಬೆರೆಸಿದ ನೀರು ಕುಡಿದ ಪರಿಣಾಮ 50ಕ್ಕೂ ಹೆಚ್ಚು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ. ಹುತ್ತೂರಿನ ಸುತ್ತಮುತ್ತ ಇರುವ ತೋಟಗಳಿಗೆ ಹಸುಗಳು ನುಗ್ಗಿ ಬೆಳೆ ಮೇಯ್ದು ಹಾಳು ಮಾಡುತ್ತವೆ ಎಂದು ಹಸುಗಳನ್ನೇ ಕೊಲ್ಲಲು ಕೆಲವು ತೋಟದ ಮಾಲೀಕರು ಯೋಚಿಸಿ ಗ್ರಾಮದ ಹೊರವಲಯದಲ್ಲಿನ ಹಳ್ಳವೊಂದರಲ್ಲಿ ನಿಂತಿದ್ದ ನೀರಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
Advertisement
ಬಯಲಿನಲ್ಲಿ ಮೇಯಲು ಹೋಗಿದ್ದ ಹಸುಗಳು ಎಂದಿನಂತೆ ಸಂಜೆ ಗ್ರಾಮಕ್ಕೆ ವಾಪಸ್ ಆಗುವ ಸಮಯದಲ್ಲಿ ಹಳ್ಳದಲ್ಲಿನ ನೀರು ಕುಡಿದಿವೆ. ನಂತರ ಮನೆಗಳಿಗೆ ಬರುವಷ್ಟರಲ್ಲಿ ದಾರಿ ನಡುವೆಯೇ 12ಕ್ಕೂ ಹೆಚ್ಚು ಹಸುಗಳು ಕುಸಿದು ಬಿದ್ದು ಸಾವನ್ನಪ್ಪಿವೆ. ಮತ್ತಷ್ಟು ಹಸುಗಳು ಅಸ್ವಸ್ಥಗೊಂಡಿವೆ. ಕೂಡಲೇ ಗ್ರಾಮಸ್ಥರು ಒಡೆಯರಪಾಳ್ಯದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ವೈದ್ಯರು ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಬಳಿಕವೂ ಬಹುತೇಕ ಹಸುಗಳು ಬದುಕುಳಿಯುವುದು ಕಷ್ಟ ಎನ್ನಲಾಗಿದೆ.