ಬೆಳಗಾವಿ: ಇನ್ನೂ 20 ವರ್ಷ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ನೀವು ರಾಹುಲ್ ಗಾಂಧಿಯನ್ನು ಪ್ರಚಾರಕ್ಕೆ ಕರೆಸಬಹುದು. ಆದರೆ ನಿಮಗೆ ಅಧಿಕಾರ ಸಿಗುವುದಿಲ್ಲ. ರಾಹುಲ್ ಗಾಂಧಿ ಕಾಲಿಟ್ಟರೆ ಸಾಕು ಐದಾರು ಲಕ್ಷ ಮತಗಳ ಅಂತರದಲ್ಲಿ ಮಂಗಳ ಅಂಗಡಿ ಗೆಲ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದ ಉಪ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ದೇಶದ ರಕ್ಷಣೆ, ಸಮಗ್ರತೆ ಪ್ರಶ್ನೆ ಬಂದಾಗ ಕಾಂಗ್ರೆಸ್ ಪಕ್ಷವು ವಿದೇಶಗಳೊಂದಿಗೆ ರಾಜಿ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಕಾಂಗ್ರೆಸ್ ಪಕ್ಷವು ಚೀನಾದಿಂದ ಹಣ ಪಡೆದುಕೊಂಡು ಉಚಿತ ವ್ಯಾಪಾರದ ಒಪ್ಪಂದವನ್ನು ಮಾಡಿಕೊಂಡು, ಭಾರತದ ವ್ಯಾಪಾರ-ವಹಿವಾಟುಗಳಿಗೆ ನಷ್ಟ ಮಾಡಿದೆ. ದೇಶದ ಹಿತದ ವಿರುದ್ದವಾದ ಒಂದು ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿಯನ್ನು ಇಲ್ಲಿ ಒತ್ತಾಯಪೂರ್ವಕವಾಗಿ ಚುನಾವಣೆಗೆ ನಿಲ್ಲಿಸಿದೆ. ಡಿಕೆಶಿ ಸತೀಶ್ ಜಾರಕಿಹೊಳಿಯನ್ನು ಹಿಡಿದುಕೊಂಡು ಬಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿ ಗೆಲ್ಲುವ ಪ್ರಶ್ನೆ ಇಲ್ಲ. ಒಂದು ವೇಳೆ ಗೆದ್ದರೆ, ಪಾರ್ಲಿಮೆಂಟ್ ನಲ್ಲಿ ಸದನದ ಬಾವಿಯೊಳಗಿಳಿದು ಮೋದಿ ವಿರುದ್ದ ಧಿಕ್ಕಾರ ಎಂದು 51 ಜನ ಕೂಗುತ್ತಿರುತ್ತಾರೆ. ಅವರೊಂದಿಗೆ ಇವರು 52ನೇಯವರಾಗಿ ಸೇರಿಕೊಳ್ಳುತ್ತಾರೆ. ಈ ರೀತಿ ಸದನದೊಳಗೆ ಕೂಗಾಡುವವರು ಬೇಕೋ ಅಥವಾ ದೇಶದಲ್ಲಿ ಕೃಷಿಗಾಗಿ ಒಳ್ಳೆಯ ಕಾನೂನನ್ನು ತಂದು, ನೀರಾವರಿಗೆ ದುಡ್ಡು ಕೊಟ್ಟು, ಜಗತ್ತಿನಲ್ಲಿ ದೇಶದ ಗರಿಮೆಯನ್ನು ಜಾಸ್ತಿ ಮಾಡಿರುವ ಪಕ್ಷದ ನಾಯಕನ ಪರವಾಗಿ ಕೈ ಎತ್ತುವವರು ಬೇಕೋ ನೀವೇ ನಿರ್ಧರಿಸಿ ಎಂದು ಮನವಿ ಮಾಡಿದರು.
ರಾಮಮಂದಿರ ನಿರ್ಮಾಣಕ್ಕೆ ಯಾರು ಒಂದು ನಯಾ ಪೈಸೆ ದುಡ್ಡು ಕೊಟ್ಟಿಲ್ಲವೋ ಅವರು ಲೆಕ್ಕ ಕೇಳ್ತಿದ್ದಾರೆ. ನೀವು ಹಣ ಕೊಟ್ಟಿಲ್ಲ. ಹಾಗಾಗಿ ನಿಮಗೆ ಲೆಕ್ಕ ಕೊಡಲ್ಲ. ಜನರಿಗೆ ಕೊಡ್ತೀವಿ. ಸಿದ್ದರಾಮಯ್ಯ ನಾನು ಸಿಎಂ ಆಗ್ತಿನೋ ಡಿಕೆಶಿ ಸಿಎಂ ಆಗ್ತಾರೋ ಅಂತ ಕನಸು ಕಾಣ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸರ್ಕಾರ ಬರಲು ಸಾಧ್ಯವೇ ಇಲ್ಲ. ನೀವು ಸುಮ್ಮನೆ ಮನೆಗೆ ಹೋಗ್ತಿರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.