ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ರೈತರು ಮತ್ತೆ ಪ್ರತಿಭಟನೆ ಆರಂಭಿಸುತ್ತಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಈ ಧರಣಿ ನಡೆಸಲಾಗುತ್ತಿದೆ.
ರಾಜ್ಯ ರೈತ ಸಂಘ, ರಾಜ್ಯ ದಲಿತ, ಕಾರ್ಮಿಕ, ರೈತ ಐಕ್ಯ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ಡಿಸೆಂಬರ್ 31ರವರೆಗೆ ಮೌರ್ಯ ಸರ್ಕಲ್ ನಲ್ಲಿ ಧರಣಿ ನಡೆಸಲಾಗುತ್ತಿದೆ. ನವದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರೋ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ಪ್ರೊಟೆಸ್ಟ್ ಮಾಡಲಾಗ್ತಿದೆ.
ಇಂದು ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿರುವ ಈ ಪ್ರತಿಭಟನೆಗೆ ಸಾಹಿತಿ ದೇವನೂರು ಮಹದೇವಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳು ಭಾಗಿಯಾಗಲಿದ್ದಾರೆ. ಈ ಬಗ್ಗೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು. ರಾಜ್ಯ ದಲಿತ, ಕಾರ್ಮಿಕ, ರೈತ ಐಕ್ಯ ಹೋರಾಟ ಸಮಿತಿಯ 25 ಮಂದಿಯ ನಿಯೋಗ ನವದೆಹಲಿಗೆ ತೆರಳಿದ್ದು, 25 ಹಾಗೂ 26 ರಂದು ದೆಹಲಿಯಲ್ಲಿ ರೈತರು ನಡೆಸುತ್ತಿರೋ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.