– 5ನೇ ಸ್ಥಾನಕ್ಕೆ ಏರಿದ ಪಂಜಾಬ್
– 3ನೇ ಸ್ಥಾನದಲ್ಲಿ ಮುಂದುವರಿದ ಬೆಂಗಳೂರು
ಅಹಮದಾಬಾದ್: ಕೆ.ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್‍ನಿಂದಾಗಿ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 35 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ.
ಗೆಲುವಿಗೆ 180 ರನ್‍ಗಳ ಗುರಿ ಪಡೆದ ಆರ್‍ಸಿಬಿ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ ಪಂಜಾಬ್ ತಂಡ 5ನೇ ಸ್ಥಾನಕ್ಕೆ ಏರಿದೆ.
ಪಂಜಾಬ್ ಪರ ಉತ್ತಮ ಬೌಲಿಂಗ್ ದಾಳಿ ಮಾಡಿದ ಹಪ್ರ್ರೀತ್ ಬ್ರಾರ್ 4 ಓವರ್ ಎಸೆದು ಒಂದು ಮೇಡನ್ ಸಹಿತ 3 ವಿಕೆಟ್ ಪಡೆದು ಆರ್‍ಸಿಬಿ ಕುಸಿತಕ್ಕೆ ಕಾರಣರಾದರು.
ಆರ್‍ಸಿಬಿ ಪರ ವಿರಾಟ್ ಕೊಹ್ಲಿ 35 ರನ್(34 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಜಾತ್ ಪಟೀದಾರ್ 31 ರನ್(30 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಕೊನೆಯಲ್ಲಿ ಹರ್ಷಲ್ ಪಟೇಲ್ 31ರನ್ (13 ಎಸೆತ, 3 ಬೌಂಡರಿ, 2 ಸಿಕ್ಸ್) ಕೈಲ್ ಜೇಮಿಸನ್ 16ರನ್( 11 ಎಸೆತ, 1 ಬೌಂಡರಿ, 1 ಸಿಕ್ಸ್,) ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್ ಮ್ಯಾನ್‍ಗಳು ರನ್ ಗಳಿಸಲು ಪರದಾಡಿದರು.
ರವಿ ಬಿಷ್ನೊಯ್ 2 ವಿಕೆಟ್, ರಿಲೇ ಮೆರಡಿತ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡ್‍ನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಟಾಸ್ಕ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡದ ಪರ ಮೊದಲ ಬಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ಪ್ರಭಿಸಿಮ್ರಾನ್ ಸಿಂಗ್ ಆರಂಭಿಕರಾಗಿ ರಾಹುಲ್ ಜೊತೆ ಕಾಣಿಸಿಕೊಂಡರು. ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಪ್ರಭಿಸಿಮ್ರಾನ್ 7ರನ್(7 ಎಸೆತ 1ಬೌಂಡರಿ) ಸಿಡಿಸಿ ನಿರಾಸೆ ಮೂಡಿಸಿದರು.
ರಾಹುಲ್-ಗೇಲ್ ಜುಗಲ್ ಬಂದಿ
ನಂತರ ಜೊತೆಯಾದ ರಾಹುಲ್ ಮತ್ತು ಗೇಲ್ ಆರ್‍ಸಿಬಿ ಬೌಲರ್ ಗಳಿಗೆ ಬೆವರಿಳಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ ಸಿಕ್ಸರ್ ಗಳ ಮಳೆ ಸುರಿಸಿದ ಈ ಜೊಡಿ ಎರಡನೇ ವಿಕೆಟ್‍ಗೆ 80ರನ್(45 ಎಸೆತ)ಜೊತೆಯಾಟವಾಡಿತು. ಕ್ರಿಸ್ ಗೇಲ್ 46ರನ್(24 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಕೈ ಚೆಲ್ಲಿಕೊಂಡರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಪಂಜಾಬ್ ತಂಡಕ್ಕೆ ನೆರವಾಗಲಿಲ್ಲ. ಆದರೆ ಒಂದು ಕಡೆಯಲ್ಲಿ ಅಬ್ಬರಿಸುತ್ತಿದ್ದ ಕೆ.ಎಲ್ ರಾಹುಲ್ 91 ರನ್(57 ಎಸೆತ, 7 ಬೌಂಡರಿ, 5 ಸಿಕ್ಸರ್) ಬಾರಿಸಿ ಅಜೇಯರಾಗಿ ಉಳಿದರು. ಇವರಿಗೆ ಕಡೆಯಲ್ಲಿ ಉತ್ತಮ ಸಾಥ್ ನೀಡಿದ ಹಪ್ರ್ರೀತ್ ಬ್ರಾರ್ 25ರನ್ (17 ಎಸೆತ, 1ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು.
17ನೇ ಓವರ್ ಅಂತ್ಯದಲ್ಲಿ 132 ರನ್ ಗಳಿಸಿದ್ದ ಪಂಜಾಬ್ ತಂಡ ಮುಂದಿನ ಮೂರು ಓವರ್ ಗಳಲ್ಲಿ 47 ರನ್ ಚಚ್ಚಿತು. ಅದರಲ್ಲೂ 20ನೇ ಓವರ್ ಎಸೆದ ಹರ್ಷಲ್ ಪಟೇಲ್ ಅವರು ಒಂದೇ ಓವರ್ ನಲ್ಲಿ 22ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 179ರನ್ ಮಾಡಿತು.
ರನ್ ಏರಿದ್ದು ಹೇಗೆ?
50 ರನ್-37 ಎಸೆತ
100 ರನ್-65 ಎಸೆತ
150 ರನ್-108 ಎಸೆತ
179 ರನ್-120 ಎಸೆತ