ಬೆಂಗಳೂರು: ಕೊರೊನಾ ವೈರಸ್ ಮುಗಿದ ಕಥೆ ಎಂದು ಭಾವಿಸಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ನಗರದಲ್ಲಿ ಪಾರ್ಟಿ ಮಾಡಿದ 36 ಮಂದಿಗೆ ಕೊರೊನಾ ಬಂದಿದೆ.
ಫೆ.6 ರಂದು 40 ಜನ ಬೊಮ್ಮನಹಳ್ಳಿ ಬಿಳೇಕಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದವರ ಪೈಕಿ 36 ಮಂದಿಗೆ ಕೊರೊನಾ ಬಂದಿದೆ.
25 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಒಟ್ಟು 2 ಸಾವಿರ ಮಂದಿ ಅಪಾರ್ಟ್‌ಮೆಂಟ್‌ನಲ್ಲಿದ್ದು ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ.
ಜ್ವರ ,ಕೆಮ್ಮು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವಂತೆ ಅಪಾರ್ಟ್‌ಮೆಂಟ್‌ನಿಂದ ಕರೆ ಬಂದಿದೆ. ಕರೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ 36 ಮಂದಿಗೆ ಸೋಂಕು ಬಂದಿರುವುದು ದೃಢಪಟ್ಟಿದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆರೋಗ್ಯ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಲಿದ್ದಾರೆ.