ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕರ್ನಾಟಕದ ಹಲವೆಡೆ ವರುಣನ ಆರ್ಭಟ ಮುಂದುವರಿದೆ. ಜೊತೆಗೆ ರಾಜಧಾನಿ ಬೆಂಗಳೂರಿನಲ್ಲಿಯೂ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಿನ್ನೆ ಹಾಗೂ ಇಂದು ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 22 ಸೆಂ.ಮೀ. ಮಳೆಯಾಗಿದೆ. ಬೆಳಗಾವಿಯ ನಿಪ್ಪಾಣಿಯಲ್ಲಿ 14 ಸೆಂಟಿ ಮೀಟರ್ ಮಳೆಯಾಗಿದೆ. ಉತ್ತರ ಕನ್ನಡದ ಮಂಚಿಗೆರೆಯಲ್ಲಿ 11 ಸೆಂ.ಮೀ. ಮಳೆ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 12 ಸೆಂ.ಮೀ. ಮಳೆಯಾಗಿದೆ. ಜೂನ್ 17ರಿಂದ 21ರವರೆಗೆ ವ್ಯಾಪಕ ಮಳೆ ಸಾಧ್ಯತೆಯಿದೆಯೆಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ವ್ಯಾಪಕ ಮಳೆಯಾಗಿದ್ದು, ಜೂನ್ 17, 18 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಹಾಗೂ ಜೂನ್ 19, 20ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆ ಜೂನ್ 17ರಂದು ಆರೆಂಜ್ ಅಲರ್ಟ್ ಹಾಗೂ ಜೂನ್ 18ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿಯಲ್ಲಿ ಯೆಲ್ಲೋ ಅಲರ್ಟ್, 3 ಜಿಲ್ಲೆಗಳಲ್ಲಿ ಜೂನ್ 17, 18ರಂದು ಯೆಲ್ಲೋ ಅಲರ್ಟ್‍ನ್ನು ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಜೊತೆಗೆ ಬೆಂಗಳೂರಲ್ಲಿಯೂ ಮುಂದಿನ ಎರಡು ದಿನ ಮಳೆಯಾಗುವ ನಿರೀಕ್ಷೆಯಿದೆಯೆಂದು ತಿಳಿಸಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮುಂಗಾರು ಚುರುಕು- ಜೋಗಕ್ಕೆ ಜೀವದ ಕಳೆ