– ಪೂರ್ವಭಾವಿ ಸಭೆ ನಡೆಸಿದ ರಾಜನಾಥ್ ಸಿಂಗ್
ನವದೆಹಲಿ: ಏಷ್ಯಾದ ಅತಿ ದೊಡ್ಡ ಏರ್ ಶೋ ‘ಏರೋ ಇಂಡಿಯಾ’ ಬೆಂಗಳೂರಿನಲ್ಲೇ 2021ರ ಫೆಬ್ರವರಿ 3 ರಿಂದ 7ರವರೆಗೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
‘ಏರೋ ಇಂಡಿಯಾ’ ಏರ್ ಶೋ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿದ್ದು, ಪ್ರತಿ ವರ್ಷದಂತೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಚಿವರು ಸಭೆಯಲ್ಲಿ ಸೂಚಿಸಿದ್ದಾರೆ. ಈಗಾಗಲೇ ಖ್ಯಾತ ವೈಮಾನಿಕ ಸಂಸ್ಥೆಗಳು ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿವೆ. ಹಲವು ರಾಷ್ಟ್ರಗಳ ಪ್ರತಿನಿಧಿಗಳು, ರಕ್ಷಣಾ ಕ್ಷೇತ್ರದ ಪ್ರಮುಖ ಸಂಸ್ಥೆಗಳು ಹಾಗೂ ಹೂಡಿಕೆದಾರರು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ.
1996ರಲ್ಲಿ ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲಿ ಶುರುವಾಗಿತ್ತು. ಅಂದಿನಿಂದಲೂ ಏರ್ ಶೋ ಬೆಂಗಳೂರಿನಲ್ಲೇ ನಡೆಯುತ್ತಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಏರ್ ಶೋ ನಡೆಯುತ್ತದೆ. ಈ ವೇಳೆ ಲೋಹದ ಹಕ್ಕಿಗಳನ್ನು ನೋಡೋದೆ ಚೆಂದ. ಇದೀಗ ಇದರ 13ನೇ ಆವೃತ್ತಿ ನಡೆಯಲಿದೆ. ಕೋವಿಡ್-19 ಹರಡುವಿಕೆ ತಡೆಯಲು ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗುವುದು. ನಿಗದಿಯಂತೆಯೇ ಏರ್ ಶೋ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಏರ್ ಶೋ ವೇಳೆ ಭಾರೀ ಅವಘಡ ಸಂಭವಿಸಿತ್ತು. ಸ್ಥಳದಲ್ಲಿದ್ದ ಒಣ ಹುಲ್ಲಿನಿಂದಾಗಿ ಎಲ್ಲೆಡೆ ಬೆಂಕಿ ವ್ಯಾಪಿಸಿದ್ದು, ಸುಮಾರು 32 ಎಕರೆ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಹರಡಿತ್ತು. ಪರಿಣಾಮ ಪಾರ್ಕ್ ಮಾಡಿದ್ದ 200 ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಕಾರು ನಿಲ್ಲಿಸಿದ್ದ ಸ್ಥಳ ಖಾಸಗಿ ಪಾರ್ಕಿಂಗ್ ಪ್ರದೇಶವಾಗಿದ್ದು, ಘಟನೆ ಸಂಬಂಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯ ತೀವ್ರತೆಯ ವಿಡಿಯೋ, ಫೋಟೋ ತೆಗೆದು ಪೋಸ್ಟ್ ಮಾಡಿದ್ದರು.