ಭೋಪಾಲ್: ವ್ಯಕ್ತಿಯೊಬ್ಬ ಬಿಸಿ ಬಿಸಿ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಅತ್ತೆಯನ್ನೇ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಬಿಲ್ಲೋರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗುಜರ್ ಬಾಯಿ (55) ಮೃತ ಮಹಿಳೆ. ಆರೋಪಿಯನ್ನು ಸುರೇಶ್ (35) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಅತ್ತೆ-ಮಾವನ ಮನೆಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ಜಗದೀಶ್ ಪಾಟೀದಾರ್ ತಿಳಿಸಿದ್ದಾರೆ.
ಆರೋಪಿ ಸುರೇಶ್ ಮಂಗಳವಾರ ಮಧ್ಯರಾತ್ರಿ ಮನೆಗೆ ಆಗಮಿಸಿದ್ದನು. ಆಗ ಅತ್ತೆ ಗುಜರ್ ಬಾಯಿ (55) ಆತನಿಗೆ ಊಟ ಬಡಿಸಿದ್ದರು. ಈ ವೇಳೆ ಆರೋಪಿ ಬಿಸಿ ಚಪಾತಿ ನೀಡುವಂತೆ ಕೇಳಿದ್ದಾನೆ. ಆದರೆ ಅತ್ತೆ ಬಿಸಿ ಚಪಾತಿ ನೀಡಲು ನಿರಾಕರಿಸಿದ್ದಾರೆ. ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿ ಸುರೇಶ್ ದೊಣ್ಣೆಯಿಂದ ಹೊಡೆದು ಅತ್ತೆಯನ್ನು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಜರ್ ಬಾಯಿ ಕಿರುಚಾಟ ಕೇಳಿ ಉಳಿದ ಕುಟುಂಬದ ಸದಸ್ಯರು ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾಯಿ ಮೃತಪಟ್ಟಿದ್ದು, ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದನು. ನಂತರ ಈ ಕುರಿತು ಮಾವ ಆರೋಪಿ ಸುರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪೊಲೀಸರು ಮಾವ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುರೇಶ್‍ನನ್ನು ಬಂಧಿಸಿದ್ದಾರೆ.