ವಿಜಯಪುರ: ಬಿಸಿಲ ನಾಡು ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ರಾತ್ರಿಯಿಡೀ ಎಡೆಬಿಡದೆ ಮಳೆ ಸುರಿಯುತ್ತಿದೆ.
ನಿನ್ನೆ ರಾತ್ರಿ ಶುರುವಾದ ಮಳೆ ಇಂದು ಮಧ್ಯಾಹ್ನ ವರಗೆ ಬಿಟ್ಟು ಬಿಡದೆ ಸುರಿದಿದೆ. ರಾತ್ರಿಯಿಡಿ ರಭಸವಾಗಿ ಮಳೆ ಸುರಿದರೆ, ಬೆಳಗ್ಗೆ ಜಿಟಿ ಜಿಟಿ ಮಳೆ ಸುರಿದಿದೆ. ಮಳೆಯ ಆರ್ಭಟಕ್ಕೆ ಕೆಲ ಗ್ರಾಮಗಳು ಅಕ್ಷರ ಸಹ ನಲುಗಿ ಹೋಗಿವೆ. ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ರಸ್ತೆಗಳು ಮಳೆ ನೀರಿನಿಂದ ಆವೃತವಾಗಿವೆ.
ನಿರಂತರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವೀಕೆಂಡ್ ಆಗಿದ್ದರಿಂದ ವಾಹನಗಳ ಓಡಾಟ ಅಷ್ಟೇನು ಇರಲಿಲ್ಲ. 24 ಗಂಟೆಯಲ್ಲಿ 24.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ಮುಂಗಾರು ಬಿತ್ತನೆಗೆ ಕಾದು ಕುಳಿತದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.