ಮಂಗಳೂರು: ಕಾಂಗ್ರೆಸ್ ನಾಯಕಿಯೊಬ್ಬರು ಬಿಜೆಪಿ ಮುಖಂಡನಿಗೆ ಮಸಿ ಬಳಿದರೆ ಒಂದು ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ಮಾಜಿ ಕಾರ್ಪೊರೇಟರ್, ಬಿಲ್ಲವ ನಾಯಕಿ ಪ್ರತಿಭಾ ಕುಳಾಯಿ ಅವರು ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿಗೆ ಮಸಿ ಬಳಿದವರಿಗೆ ಒಂದು ಲಕ್ಷ ನೀಡುತ್ತೇನೆಂದು ತಿಳಿಸಿದ್ದಾರೆ.
ಜನಾರ್ದನ ಪೂಜಾರಿ ಮತ್ತು ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯ್ಯರ ವಿರುದ್ಧ ಜಗದೀಶ್ ಅಧಿಕಾರಿ ಕೀಳಾಗಿ ಮಾತನಾಡಿದ್ದರು. ಹೀಗಾಗಿ ನಾಲ್ಕು ದಿನಗಳ ಒಳಗೆ ಅಧಿಕಾರಿ ಕ್ಷಮೆ ಯಾಚಿಸುವಂತೆ ಪ್ರತಿಭಾ ಆಗ್ರಹಿಸಿದ್ದಾರೆ. ಗರೋಡಿಗೆ ಹೋಗಿ ಕ್ಷಮೆ ಕೇಳಬೇಕು, ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಅಧಿಕಾರಿ ಕ್ಷಮೆಯಾಚಿಸದೇ ಇದ್ದರೆ ಅವರ ಮುಖಕ್ಕೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ ಒಂದು ಲಕ್ಷ ನೀಡುವುದಾಗಿ ಪ್ರತಿಭಾ ಫೇಸ್ ಬುಕ್ ಲೈವ್ ನಲ್ಲಿ ಘೋಷಿಸಿದ್ದಾರೆ.
ಏನಿದು ಪ್ರಕರಣ?
ಇತ್ತೀಚೆಗೆ ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಷಣದ ವೇಳೆ ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಜಗದೀಶ್ ಅಧಿಕಾರಿಯವರ ಮಾತುಗಳ ಆಡಿಯೋ ವೈರಲ್ ಆಗಿತ್ತು. ಈ ಕುರಿತು ಸ್ಪಷ್ಟನೆ ಕೇಳಲು ಬಿಲ್ಲವ ಸಮುದಾಯದ ಮುಖಂಡರೊಬ್ಬರು ಅಧಿಕಾರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ಮಾತಿನ ನಂತರ ಕರೆ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಜಗದೀಶ್ ಅಧಿಕಾರಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ರೆಕಾರ್ಡ್ ಆಗಿದ್ದು, ಇದೀಗ ಬಿಲ್ಲವ ಸಮುದಾಯದವರ ಅಕ್ರೋಶಕ್ಕೆ ಕಾರಣವಾಗಿದೆ.