ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಹಿರಿಯ ನಾಯಕ ಕಪಿಲ್ ಸಿಬಲ್ ಈಗ ಯೂ ಟರ್ನ್ ಹೊಡೆದಿದ್ದಾರೆ.
ಅಧ್ಯಕ್ಷರನ್ನು ನೇಮಿಸುವ ಸಂಬಂಧ ಆರಂಭಗೊಂಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಹಿರಿಯ ನಾಯಕರ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಕಪಿಲ್ ಸಿಬಲ್ ಟ್ವಿಟ್ಟರ್‌ನಲ್ಲಿ ಗರಂ ಆಗಿ ಟ್ವೀಟ್ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಟ್ವೀಟ್ ಮಾಡಿದ ಅವರು, ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ನಾವು ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ರಾಜಸ್ಥಾನ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಬಿಜೆಪಿ ಸರ್ಕಾರವನ್ನು ಉರುಳಿಸಿ ಮಣಿಪುರದಲ್ಲಿ ಹಾಲಿ ಪಕ್ಷವನ್ನು ತರುವಲ್ಲಿ ನೆರವಾದೆ. ಆದರೂ ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ಟ್ವೀಟ್ ಮಾಡಿದ್ದರು.
ತನ್ನ ಹೇಳಿಕೆ ಟ್ರೆಂಡ್ ಆದ ಬೆನ್ನಲ್ಲೇ ಕಪಿಲ್ ಸಿಬಲ್ ಯೂಟರ್ನ್ ಹೊಡೆದಿದ್ದಾರೆ. ರಾಹುಲ್ ಗಾಂಧಿ ನನಗೆ ಜೊತೆ ಮಾತನಾಡಿ ನಿಮ್ಮನ್ನು ಉದ್ದೇಶಿಸಿ ಹೇಳಿಲ್ಲ ಎಂದು ಹೇಳಿದರು. ಹೀಗಾಗಿ ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಕಪಿಲ್ ಸಿಬಲ್ ಹೇಳಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದು ಏನು?
ಕೋವಿಡ್ 19, ಮಧ್ಯಪ್ರದೇಶ, ರಾಜಸ್ಥಾನ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕರಾದವರು ಈ ರೀತಿ ಪತ್ರ ಬರೆಯುವುದು ಸರಿಯಲ್ಲ ಎಂದು ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು. ಸೋನಿಯಗಾಂಧಿ ಗೆ ಆರೋಗ್ಯ ಸಮಸ್ಯೆ ಇದೆ. ಅವರು ಆಸ್ಪತ್ರೆ ದಾಖಲಾದ ವೇಳೆ ಪತ್ರ ಬರೆಯುವುದು ಎಷ್ಟು ಸರಿ? ಕಾಂಗ್ರೆಸ್ ಕೆಲ ಹಿರಿಯ ನಾಯಕರು ಬಿಜೆಪಿ ಜೊತೆ ಸೇರಿಕೊಂಡು ಈಗ ನಮ್ಮ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಪಿಲ್ ಸಿಬಲ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡುವುದು ಇದು ಮೊದಲೆನಲ್ಲ. ರಾಜಸ್ಥಾನ ಸರ್ಕಾರದಲ್ಲಿನ ಭಿನ್ನಮತದ ಬಗ್ಗೆ ಕಪಿಲ್ ಸಿಬಲ್ ಬೇಸರಗೊಂಡು ಟ್ವೀಟ್ ಮಾಡಿದ್ದರು. ನಮ್ಮ ಪಕ್ಷದ ಬಗ್ಗೆ ನನಗೆ ಆತಂಕವಾಗುತ್ತಿದೆ. ನಮ್ಮ ಲಾಯಗಳಿಂದ(ಕುದುರೆಗಳನ್ನು ಕಟ್ಟಿ ಹಾಕುವ ಜಾಗ) ಕುದುರೆಗಳು ಹೊರ ಬಂದ ನಂತರ ನಾವು ಎಚ್ಚೆತ್ತುಕೊಳ್ಳುವುದೇ ಎಂದು ಪ್ರಶ್ನಿಸಿದ್ದರು.