– ಹಲವು ಕ್ಷೇತ್ರಗಳಲ್ಲಿ ಒಡಂಬಡಿಕೆ ಆಗಿದ್ದು ಸತ್ಯ
ತುಮಕೂರು: ಕೇವಲ ಚಾಮುಂಡೇಶ್ವರಿಯಲ್ಲಿ ಅಲ್ಲದೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ನಾವು ಒಡಂಬಡಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದ್ದು ನಿಜ ಎಂದು ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಸ್ಫೋಟಕ ಹೇಳಿಕೆಯನ್ನ ನೀಡಿದ್ದಾರೆ.
ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯನವರಿಗೆ ಈಗ ಜ್ಞಾನೋದಯವಾದಂತಿದೆ. ಸಿದ್ದರಾಮಯ್ಯರನ್ನ ಸೋಲಿಸಬೇಕೆಂದು ಬೆಂಬಲ ನೀಡಿದ್ದು ನಿಜ. ಅಕ್ಷರಶಃ ಸತ್ಯ, ಅದೊಂದೇ ಕ್ಷೇತ್ರವಲ್ಲ ಸುಮಾರು ಕ್ಷೇತ್ರಗಳಲ್ಲಿ ಬಿಜೆಪಿ ನಾವು ಒಡಂಬಡಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದ್ದೀವಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಇದರಲ್ಲಿ ಹೊಸದೇನಿದೆ ಎಂದು ಎಸ್.ಆರ್.ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.
ನಾನು ಯಾವ ಪಕ್ಷಕ್ಕೂ ಹೋಗುತ್ತಿಲ್ಲ. ನನಗೆ ರಾಜಕೀಯ ಬೇಸರವಾದ್ದು, ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಅಸಮಾಧಾನ ಇದೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ಅಸಹ್ಯಪಡುವಂತಿದ್ದು, ಹೀಗಾಗಿ ಎಲ್ಲೂ ಹೋಗದೇ ತೋಟದಲ್ಲಿದ್ದೇನೆ. ಬಿಜೆಪಿ ಜೊತೆಗಿನ ಸಖ್ಯ ಬಗ್ಗೆ ನೀವು ಕುಮಾರಸ್ವಾಮಿ ಅವರನ್ನ ಕೇಳಬೇಕು. ನಾನು ಜೆಡಿಎಸ್ ಶಾಸಕ, ಇಲ್ಲಿಯೇ ಇದ್ದೇನೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಮಾಜಿ ಸಿಎಂಗಳಾಗಿರುವ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವೆ ಒಳಒಪ್ಪಂದ ಬಗ್ಗೆ ವಾಕ್ಸಮರವೇ ನಡೆದಿದೆ. ಇದೀಗ ಜೆಡಿಎಸ್ ಶಾಸಕರ ಹೇಳಿಕೆ ದಳಪತಿಗಳಿಗೆ ಇರುಸು ಮುರುಸು ಉಂಟು ಮಾಡಿದೆ.