ಹಾಸನ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ಯಡಿಯೂರಪ್ಪ ಸೇರಿ ಪ್ರಾದೇಶಿಕ ಪಕ್ಷ ಕಟ್ಟಬೇಕು ಎಂದು ಬೇಲೂರು ಕ್ಷೇತ್ರದ ಜೆಡಿಎಸ್ ಶಾಸಕ ಲಿಂಗೇಶ್ ಹೇಳಿದ್ದಾರೆ.
ಬೇಲೂರಿನಲ್ಲಿ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆ ಬೇಸರ ತರುವಂತಹದ್ದು. ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸುತ್ತಿವೆ. ಸಂಪೂರ್ಣ ಅಧಿಕಾರವಿದ್ದರೆ ಯಾರಾದರೂ ಸಾಧನೆ ಮಾಡಬಹುದು. ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ನಾಯಕತ್ವ ಬದಲಾವಣೆ ತಂದು ರಾಜಕೀಯ ದೊಂಬರಾಟ ಸೃಷ್ಟಿಸಿದ್ದಾರೆ. ಸೈದ್ಧಾಂತಿಕವಾಗಿ ನಾವು ಬಿಜೆಪಿಯನ್ನು ವಿರೋಧಿಸುತ್ತೇವೆ. ಆದರೆ ವೈಯುಕ್ತಿಕವಾಗಿ ಅಧಿಕಾರ ಮುಗಿಯುವವರೆಗೂ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು ಎಂದರು.
ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು. ಬದಲಾವಣೆ ಮಾಡಿದರೆ ದೇವೇಗೌಡರು ಹಾಗೂ ಯಡಿಯೂರಪ್ಪ ಸೇರಿ ಪ್ರಾದೇಶಿಕ ಪಕ್ಷ ಕಟ್ಟಬೇಕು. ಪಕ್ಷಗಳಿಂದ ಹೊರಬರುವ ಎಲ್ಲ ಶಾಸಕರನ್ನು ಪ್ರಾದೇಶಿಕ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಬಳಿಕ ಪಕ್ಷವನ್ನು ಅಧಿಕಾರಕ್ಕೆ ತಂದು ಉತ್ತಮ ಆಡಳಿತ ನೀಡಬೇಕು ಎಂದು ಶಾಸಕ ಲಿಂಗೇಶ್ ಹೇಳಿದ್ದಾರೆ.