ಮೈಸೂರು: ಮಂತ್ರಿ ಮಂಡಲ ವಿಸ್ತರಣೆಯಿಂದಾಗಿ ಬಿಎಸ್‍ವೈ ಇನ್ನು ಸ್ವಲ್ಪ ದಿನ ಸಿಎಂ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈಗ ಸಂಪುಟ ವಿಸ್ತರಣೆ ಆಗಿರೋದನ್ನ ನೋಡಿದ್ರೆ ಇನ್ನು ಸ್ವಲ್ಪ ದಿನ ಯಡಿಯೂರಪ್ಪ ಅವರೇ ಸಿಎಂ ಆಗಿರಬಹುದು. ಬಹುಶಃ ಸಂಪುಟ ವಿಸ್ತರಣೆ ಆದ ನಂತರ ರಾಜೀನಾಮೆ ಕೊಡ್ತಿನಿ ಅಂತ ಹೇಳಿರಬಹುದೇನೋ. ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರೂ ಸಂಪುಟ ವಿಸ್ತರಣೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು. ಹಾಗಾಗಿ ಇನ್ನು ಸ್ವಲ್ಪ ದಿನ ಅವರೇ ಸಿಎಂ ಆಗಿ ಉಳಿಯುವ ಸಾಧ್ಯತೆ ಇದೆ ಎಂದಿದ್ದಾರೆ.
ಯಡಿಯೂರಪ್ಪ ಬಜೆಟ್ ಮಂಡಿಸಲೇಬೇಕು. ಇಲ್ಲವಾದ್ರೆ ಮಾರ್ಚ್ ನಂತರ ಒಂದು ರೂಪಾಯಿಯೂ ಖರ್ಚು ಮಾಡೋಕೆ ಅವರಿಗೆ ಸಾಧ್ಯವಾಗುವುದಿಲ್ಲ. ನನ್ನ ಬಜೆಟ್ ಸ್ಟೈಲ್ ಬೇರೆ ಇತ್ತು. ಇವರ ಬಜೆಟ್ ಸ್ಟೈಲ್ ಬೇರೆ ಇದೆ. ಏನ್ ಮಾಡ್ತಾರೆ ನೋಡೋಣ. ಸಚಿವ ಸಂಪುಟ ವಿಸ್ತರಣೆಗೂ ಮುನ್ನಾ ಆಡಳಿತದ ಮೇಲೆ ಪರಿಣಾಮ ಬೀರುತ್ತಾ ಎನ್ನುವ ಮಾಧ್ಯಮದವರ ಪ್ರಶ್ನಗೆ ಉತ್ತರಿಸಿದ ಸಿದ್ದರಾಮಯ್ಯ ಅವರು ಆಡಳಿತ ಈಗಾಗಲೇ ಅದೋಗತಿಗೇ ಹೋಗಿದೆ. ಇನ್ನಷ್ಟು ಅದೋಗತಿಗೆ ಹೋಗುತ್ತದೆ. ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗುತ್ತದೆ. ಮುನಿರತ್ನಗೆ ಸಚಿವ ಸ್ಥಾನ ಸಿಗದೆ ಇರುವ ಬಗ್ಗೆ ನನಗೇನು ಗೊತ್ತಿಲ್ಲ ಎಂದಿದ್ದಾರೆ.