ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಸಿಎಂ ದೆಹಲಿ ಭೇಟಿ ಅಂತ್ಯವಾಗಿದೆ. ಆದರೆ ಸಂಪುಟ ಪುನಾರಚನೆಯೋ ಅಥವಾ ಸಂಪುಟ ವಿಸ್ತರಣೆಯೋ ಅನ್ನೋ ವಿಚಾರಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆಗೆ ಒಲವು ತೋರಿದ್ದ ಸಿಎಂಗೆ ಈ ಬೆಳವಣಿಗೆ ನಿರಾಸೆ ತಂದಿದೆ. ಭಾನುವಾರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಶುಕ್ರವಾರ ರಾತ್ರಿಯಿಂದ ಸುದ್ದಿ ಹಬ್ಬಿತ್ತು. ಆದರೆ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಅಧಿವೇಶನ ಬಳಿಕ ಅಂದ್ರೆ ಅಕ್ಟೋಬರ್ 5ರ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ಸಂಭವ ಇದೆ.
2+2 ಫಾರ್ಮುಲಾದಡಿ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ರು. ಮೂಲಗಳ ಪ್ರಕಾರ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಸಂಪುಟ ಸೇರೋದು ಬಹುತೇಕ ಪಕ್ಕಾ ಆಗಿದೆ. ಈ ಇಬ್ಬರ ಸೇರ್ಪಡೆ ವಿಚಾರ ಬಿಟ್ಟರೆ ಸಂಪುಟ ಸೇರಲಿರುವ ಉಳಿದ ಇಬ್ಬರ ಪಟ್ಟಿಯನ್ನು ಹೈಕಮಾಂಡ್ ಫೈನಲ್ ಮಾಡಲಿದೆ. ಒಂದು ವೇಳೆ ಸಂಪುಟ ಪುನಾರಚನೆ ಮಾಡೋದಾದ್ರೆ 2+5 ಫಾರ್ಮುಲಾಗೆ ಹೈಕಮಾಂಡ್ ಒಲವು ತೋರಿಸಿದೆ. ಇಬ್ಬರು ವಲಸಿಗರು ಹಾಗೂ ಐವರು ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಹೈಕಮಾಂಡ್ ಪ್ಲಾನ್ ಮಾಡ್ತಿದೆ.
ದೆಹಲಿಯಲ್ಲಿ ಬೀಡುಬಿಟ್ಟು ಲಾಬಿ ಮಾಡ್ತಿರುವ ವಿಶ್ವನಾಥ್‍ಗೆ ಸಚಿವ ಸ್ಥಾನ ಬಹುತೇಕ ಅನುಮಾನ ಎನ್ನಲಾಗಿದೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟದ ಬಗ್ಗೆ ಜೆ.ಪಿ ನಡ್ಡಾ ಜೊತೆ ಚರ್ಚೆ ಮಾಡಿದ್ದೇನೆ. ಪ್ರಧಾನಿ ಜೊತೆ ಮಾತನಾಡಿ ತಿಳಿಸೋದಾಗಿ ಹೇಳಿದ್ದಾರೆ. ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿರೋದಾಗಿ ತಿಳಿಸಿದ್ರು.
ಸಚಿವ ಸ್ಥಾನದ ಆಕಾಂಕ್ಷಿ ಸಿ.ಪಿ ಯೋಗೀಶ್ವರ್ ಮಾತನಾಡಿ, ಸಂಪುಟ ವಿಸ್ತರಣೆ ಕುರಿತು ನಿಖರ ಮಾಹಿತಿ ಇಲ್ಲ. ಯಾವಾಗ ಬೇಕಿದ್ರೂ ಸಂಪುಟ ವಿಸ್ತರಣೆ ಆಗಬಹುದು. ಪಕ್ಷ ಹಾಗೂ ಸಿಎಂ ತೀರ್ಮಾನಕ್ಕೆ ಬದ್ದ ಅಂದ್ರು. ರಾಜಕೀಯ ವಿರೋಧಿಗಳಾದ ಕುಮಾರಸ್ವಾಮಿ, ಡಿಕೆಶಿ, ನನಗೆ ಅವಕಾಶ ತಪ್ಪಿಸುವಷ್ಟು ಶಕ್ತರೇನಲ್ಲ ಅಂತ ಟಾಂಗ್ ನೀಡಿದರು.