ಬೆಂಗಳೂರು: ರಾಬರ್ಟ್ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಆಶಾ ಭಟ್ ಅವರಿಗೆ ಕನ್ನಡದಲ್ಲೇ ನಟಿಸುವಾಸೆಯಂತೆ. ಬಾಲಿವುಡ್‍ನಲ್ಲಿ ಸಿನಿಮಾ ಮಾಡಿದರೂ ನನಗೆ ಕನ್ನಡದ ಮೇಲೇ ಹೆಚ್ಚು ಪ್ರೀತಿ, ನಮ್ಮ ಜನರನ್ನೇ ರಂಜಿಸಲು ನನಗೆ ಹೆಚ್ಚು ಆಸೆ ಎಂದು ಹೇಳುವ ಮೂಲಕ ಕನ್ನಡಿಗರ ಮನಸು ಗೆದ್ದಿದ್ದಾರೆ.
ಹೌದು ಈಗಾಗಲೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿ, ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಹಾಗೂ ಮೂಲತಃ ಕರ್ನಾಟಕದವರೇ ಆದ ಆಶಾ ಭಟ್ ತಮ್ಮ ನಟನೆ ಕರೀಯರ್ ಬಗ್ಗೆ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಆಶಾ ಭಟ್, ಇದೀಗ ಮತ್ತಷ್ಟು ಸಿನಿಮಾಗಳ ನಿರೀಕ್ಷೆಯಲ್ಲಿದ್ದು, ಈ ಕುರಿತು ಸುದ್ದಿಗಳು ಸಹ ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ತಮ್ಮ ನಟನೆ ಕರೀಯರ್ ಬಗ್ಗೆ ಮಾತನಾಡಿರುವ ಆಶಾ ಭಟ್, ಬಾಲಿವುಡ್ ಸಿನಿಮಾದಲ್ಲಿ ನಟಿಸಿದರೂ ಕನ್ನಡದಲ್ಲಿ ನಟಿಸಲು ತುಂಬಾ ಆಸೆ ಇದೆ ಎಂದಿದ್ದಾರೆ.
ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ನಾನು ಸಿನಿಮಾ ಮಾಡಲು ನಿರ್ಧರಿಸಿದ ಬಳಿಕ ಭಾಷೆಯ ಎಲ್ಲೆ ಮೀರಿ ನಟಿಸಬೇಕು ಅಂದುಕೊಂಡೆ. ನನ್ನ ಮೊದಲ ಸಿನಿಮಾ ಬಾಲಿವುಡ್‍ನ ಜಂಗ್ಲಿ ಆದರೂ, ನನಗೆ ದಕ್ಷಿಣ ಭಾರತದ, ಅದರಲ್ಲೂ ಕನ್ನಡ ಸಿನಿಮಾಗಳಲ್ಲಿ ನಟಿಸಲು ತುಂಬಾ ಇಷ್ಟ. ನಾನು ಕರ್ನಾಟಕದವಳು, ಊರು ಭದ್ರಾವತಿ, ನನ್ನ ಮಾತೃ ಭಾಷೆ ಸಹ ಕನ್ನಡ. ಒಬ್ಬ ನಟಿಯಾಗಿ ವಿಭಿನ್ನ ನಟನೆ, ಡ್ಯಾನ್ಸ್ ಮೂಲಕ ನನ್ನ ಜನರನ್ನೇ ರಂಜಿಸಬೇಕು ಎಂಬುದು ನನ್ನ ಆಸೆ ಎಂದು ಮನದಾಳವನ್ನು ಹಂಚಿಕೊಂಡಿದ್ದಾರೆ.
ರಾಬರ್ಟ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಾಗ, ಕನ್ನಡದ ಚೊಚ್ಚಲ ಸಿನಿಮಾ ಈ ರೀತಿ ದೊಡ್ಡ ಮಟ್ಟದಲ್ಲಿ ಇರುತ್ತೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ರಾಬರ್ಟ್ ಸಿನಿಮಾಗೆ ನಾನು ಆಯ್ಕೆಯಾಗುತ್ತಿದ್ದಂತೆ ಚಿತ್ರ ತಂಡದವರು ಸಹ ಹೆಮ್ಮೆಪಟ್ಟರು, ‘ನಮ್ಮ ಕನ್ನಡತಿ’ ಎಂದು ಸ್ವಾಗತಿಸಿದರು. ಆದರೆ ಈ ಸಿನಿಮಾದಲ್ಲಿ ನಟಿಸಲು ನಾನು ಸಹ ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.