– ಮಹಿಳೆಯರು ಬಸ್ ಮಾಡ್ಕೊಂಡ್ ಬಂದ್ರೆ, ಪುರುಷರು ಟಿಟಿಯಲ್ಲಿ ಬಂದ್ರು
ಚಿಕ್ಕಮಗಳೂರು: ಮಹಿಳೆಯರು ಬಾರ್ ಬೇಡ ಎಂದು ಪ್ರತಿಭಟನೆ ನಡೆಸಿದರೆ, ಅವರ ಪಕ್ಕದಲ್ಲೇ ಪುರುಷರು ಕೂಡ ಬಾರ್ ಬೇಕು ಎಂದು ಪ್ರತಿಭಟನೆ ನಡೆಸಿರುವ ಘಟನೆ ನಗರದ ಅಬಕಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.
ಜಿಲ್ಲೆಯ ಕಡೂರು ತಾಲೂಕಿನ ಅಂಚೇ ಚೋಮನಹಳ್ಳಿ ಗ್ರಾಮದಲ್ಲಿ ಕಳೆದೊಂದು ತಿಂಗಳ ಹಿಂದೆ ವೈನ್ ಶಾಪ್‍ವೊಂದು ಆರಂಭಗೊಂಡಿತ್ತು. ಆ ವೈನ್ ಶಾಪ್ ಆರಂಭಗೊಳ್ಳುವಾಗಲೂ ಸ್ಥಳೀಯರು ಬಾರ್ ಮುಂದೆ ಪ್ರತಿಭಟನೆ ನಡೆಸಿ, ಬಾರ್ ಬೇಡ ಎಂದು ಆಗ್ರಹಿಸಿದ್ದರು. ಆದಾಗ್ಯೂ ಬಾರ್ ಓಪನ್ ಮಾಡಿದ್ದರಿಂದ ಸ್ಥಳೀಯರು ಬಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇಂದು ಹಳ್ಳಿಯ ಮಹಿಳೆಯರು ಬಸ್ ಮಾಡಿಕೊಂಡು ಬಂದು ಅಬಕಾರಿ ಡಿಸಿ ಕಚೇರಿ ಮುಂದೆ ಬಾರ್ ಬೇಡ ಎಂದು ಪ್ರತಿಭಟನೆ ನಡೆಸಿದರೆ, ಪುರುಷರು ಮೂರು ಟಿಟಿ ವಾಹನ ಮಾಡಿಕೊಂಡು ಬಂದು ನಮಗೆ ಬಾರ್ ಬೇಕೆಂದು ಅದೇ ಮಹಿಳೆಯರ ಪಕ್ಕದಲ್ಲಿ ನಿಂತು ಪ್ರತಿಭಟನೆ ನಡೆಸಿದ್ದಾರೆ.
Advertisement
Advertisement
ಬಾರ್ ವಿರುದ್ಧ ಆಕ್ರೋಶ ಹೊರಹಾಕಿರೋ ಮಹಿಳೆಯರು, ನಮ್ಮ ಜನಾಂಗದಲ್ಲಿ ಎಲ್ಲರೂ ಕುಡಿಯುತ್ತಾರೆ. ಅದಕ್ಕೆ ನಾವಿನ್ನೂ ಅಭಿವೃದ್ಧಿ ಆಗಿಲ್ಲ. ಗಂಡಸರು ಬೆಳಗ್ಗೆಯಿಂದ ಸಂಜೆಯವರೆಗೂ ಕುಡಿಯುತ್ತಾರೆ. ನಾವು ಹೆಣ್ಣು ಮಕ್ಕಳು ಎಷ್ಟು ಅಂತ ದುಡಿಯೋದು. ದುಡಿದು ಎಲ್ಲಿ ಹಣವಿಟ್ಟರೂ ಬಿಡುವುದಿಲ್ಲ ಕದಿಯುತ್ತಾರೆ. ಹೆಂಡಕ್ಕಾಗಿ ಮನೆಯ ಸಾಮಾನುಗಳನ್ನೇ ಮಾರುತ್ತಾರೆ. ದುಡಿದ ಹಣವನ್ನೆಲ್ಲ ಕುಡಿದು ಖಾಲಿ ಮಾಡುತ್ತಾರೆ. ನಮಗೂ ಹೊಟ್ಟೆಗೆ ತಂದು ಹಾಕಲ್ಲ. ಅವರೂ ಹೊಟ್ಟೆಗೆ ತಿನ್ನಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Advertisement
ಇಡೀ ದಿನ ಕುಡಿದು ಮನೆಗೆ ಬಂದು ಪತ್ನಿ, ಮಕ್ಕಳಿಗೆ ಹೊಡೆಯುತ್ತಾರೆ. ನಮ್ಮ ಕಷ್ಟ ಯಾರಿಗೆ ಹೇಳೋದು? ಬಾರ್ ಹತ್ತಿರ ಇದೆ ಎಂದು ಪ್ರತಿದಿನ ಕುಡಿಯುತ್ತಾರೆ. ಬಾರ್ ದೂರ ಇದ್ದರೆ ಒಳ್ಳೆಯದು. ಅದಕ್ಕೆ ಬಾರ್ ಬೇಡ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಿದ್ದೇವೆ ಎಂದು ನೊಂದ ಮಹಿಳೆಯರು ಕಣ್ಣೀರಿಟ್ಟಿದ್ದಾರೆ.
Advertisement
ಮಹಿಳೆಯರ ಪಕ್ಕದಲ್ಲಿ ಪುರುಷರ ಬಾರ್ ಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಇಡೀ ದಿನ ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಸಂಜೆ ಆರು ಗಂಟೆ ಆಗುತ್ತಿದ್ದಂತೆ ಎಣ್ಣೆ ಬೇಕು. ಇಲ್ಲ ಅಂದ್ರೆ ಕೈ-ಕಾಲು ಆಡಲ್ಲ. ಬಾಣಾವರ, ಮತಿಘಟ್ಟ, ದೇವನೂರು ಯಾವ ಊರಿಗೆ ಹೋಗಬೇಕೆಂದರೂ 10 ಕಿ.ಮೀ. ಆಗುತ್ತೆ. ಇಡೀ ದಿನ ದುಡಿದು ಮತ್ತೆ ಹೋಗೋಕೆ ಆಗಲ್ಲ. ಅದಕ್ಕೆ ನಮ್ಮೂರಲ್ಲೇ ಬಾರ್ ಇದೆ ಇರಲಿ ಅನ್ನೋದು ಗಂಡಸರ ವಾದ.
ಹೊರಗಡೆ 150 ರೂಪಾಯಿಗೆ ಕದ್ದು ಮಾರುತ್ತಾರೆ. ಇಡೀ ದಿನ ದುಡಿದು ನಮ್ಮ ದುಡ್ಡಲ್ಲಿ ಕದ್ದು ಕುಡಿಯಬೇಕಾ? ಎಣ್ಣೆ ತರಲು ದೂರ ಹೋಗುವಾಗ ಅಪಘಾತವಾಗಿ ಏನಾದರೂ ಆದರೆ ನಮ್ಮ ಪತ್ನಿ, ಮಕ್ಕಳ ಗತಿ ಏನು ಎಂದು ಯೋಚಿಸಿ. ಹೀಗಾಗಿ ನಮ್ಮೂರಲ್ಲೇ ಬಾರ್ ಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ನಮ್ಮ ಊರಿನ ಜನರ ಜೊತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಎಲ್ಲರೂ ಬಂದಿದ್ದೇವೆ. ನಮಗೆ ಬಾರ್ ಬೇಕು ಅಷ್ಟೇ ಎಂದು ಗಂಡಸರು ಅಬಕಾರಿ ಡಿಸಿ ಕಚೇರಿ ಮುಂದೆ ಹೋರಾಟಕ್ಕಿಳಿದಿದ್ದಾರೆ. ಕಚೇರಿ ಮುಂದೆ ಈ ಎಣ್ಣೆ ಹೈಡ್ರಾಮಾ ನೋಡಿದ ಅಬಕಾರಿ ಇಲಾಖೆ ಅಧಿಕಾರಿಗಳು ಮಹಡಿ ಮೇಲೆ ಮೂಕ ಪ್ರೇಕ್ಷರಂತೆ ನಿಂತಿದ್ದರು.