ರಾಯಚೂರು: ಜಿಲ್ಲೆಯನ್ನ ಹಿಂದುಳಿದ ಪ್ರದೇಶ ಅಂತ ಕರೆಯೋದಕ್ಕೆ ಸಾಕ್ಷಿಯಂಬಂತೆ ಇಲ್ಲೊಂದು ಗ್ರಾಮ ಇದೆ. ಈ ಗ್ರಾಮ ಹುಟ್ಟಿದಾಗಿನಿಂದ ಬಸ್ ಮುಖವನ್ನೇ ನೋಡಿಲ್ಲ. ಈಗಲೂ ಜನ ಎತ್ತಿನ ಬಂಡಿಯಲ್ಲೇ ಓಡಾಡುತ್ತಿದ್ದಾರೆ. ಅವಸರದ ಕೆಲಸಗಳು ಏನಾದ್ರೂ ಇದ್ರೆ ಪಟ್ಟಣಕ್ಕೆ ಬರುವುದು ಕಷ್ಟವೇ ಸರಿ. ಸಿರವಾರ ತಾಲೂಕಿನ ಕೆ.ತುಪ್ಪದೂರು ಗ್ರಾಮ ಈಗಲೂ ಐವತ್ತು ವರ್ಷ ಹಿಂದಿದೆ.
ಸುಮಾರು ಒಂದು ಸಾವಿರ ಜನ ವಾಸವಾಗಿರುವ ಈ ಗ್ರಾಮ ಇದುವರೆಗೆ ಬಸ್ ಕಂಡಿಲ್ಲ. ಇಲ್ಲಿ ಉತ್ತಮ ರಸ್ತೆಗಳು, ಹಳ್ಳಕ್ಕೆ ಸೇತುವೆಯೂ ಇಲ್ಲ. ಹೀಗಾಗಿ ಬಸ್‍ಗಳನ್ನ ಬಿಡಲು ಸಾರಿಗೆ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳು ಇದುವರೆಗೂ ಇಚ್ಛಾಶಕ್ತಿಯನ್ನ ತೋರಿಲ್ಲ. ಬಸ್ ವ್ಯವಸ್ಥೆ ಇಲ್ಲದೆ ಹೈರಾಣಾದ ಜನ ಅನಾರೋಗ್ಯ ಪೀಡಿತರನ್ನ ಪಟ್ಟಣ ಪ್ರದೇಶಕ್ಕೆ ಕೊಂಡೊಯ್ಯಲು ಹರಸಾಹಸವೇ ಮಾಡಬೇಕಾಗುತ್ತದೆ.
ಗರ್ಭಿಣಿ ಹಾಗೂ ವೃದ್ಧರಿಗೆ ಎತ್ತಿನ ಬಂಡಿಯಲ್ಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಎತ್ತಿನ ಬಂಡಿ ಕಟ್ಟಿಕೊಂಡೇ ರೋಗಿಗಳನ್ನು ಆಸ್ಪತ್ರೆಗೆ ಒಯ್ಯಲಾಗುತ್ತೆ. ಎಮರ್ಜೆನ್ಸಿ ಇದ್ರೆ ಅಂಬುಲೆನ್ಸ್ ಸಹ ಈ ಊರಿಗೆ ಬರುವುದು ಅಷ್ಟು ಸುಲಭದ ಮಾತಲ್ಲ. ಮಳೆಗಾಲದಲ್ಲಂತೂ ಇಲ್ಲಿನ ರಸ್ತೆ ಕೆಸರಿನಂತಾಗಿ ಜನರು ನಡೆದಾಡಲೂ ಕಷ್ಟವಾಗುತ್ತೆ. ತುಪ್ಪದೂರು ಗ್ರಾಮಕ್ಕೆ ಇದುವರೆಗೂ ಬಸ್ ಕಲ್ಪಿಸದಿರುವುದಕ್ಕೆ ಗ್ರಾಮದ ಜನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆ.ತುಪ್ಪದೂರು ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಂಪೂರ್ಣ ವಿಫಲರಾಗಿದ್ದಾರೆ. ದೊಡ್ಡಗಾಡಿಗಳು ಬಂದರೆ ಹಳ್ಳದ ಸೇತುವೆ ಕುಸಿದು ಬೀಳುವ ಹಂತದಲ್ಲಿದೆ. ಈವರೆಗೂ ಯಾವೊಬ್ಬ ಅಧಿಕಾರಿ ನಮ್ಮ ಕಷ್ಟ ಕೇಳಲು ತುಪ್ಪದೂರು ಗ್ರಾಮಕ್ಕೆ ಭೇಟಿ ನೀಡಿಲ್ಲ ಅಂತ ಗ್ರಾಮಸ್ಥರ ಆರೋಪಿಸಿದ್ದಾರೆ.
ಕೇವಲ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಆಶ್ವಾಸನೆ ಕೊಡುವ ರಾಜಕಾರಣಿಗಳು ಗೆದ್ದಮೇಲೆ ಇತ್ತ ತಲೆಹಾಕಿಯು ಮಲಗುವುದಿಲ್ಲ. ನಾವು ಬಸ್‍ನ್ನೆ ನೋಡಿಲ್ಲ ಅಂತ ಇಲ್ಲಿನ ವಯೋವೃದ್ಧರು ಬೇಸರ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಈಗಲಾದ್ರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.