-ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ
ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಇಂದು ಬಸವಸಾಗರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಳೆ ವೇಳೆಗೆ ನೀರಿನ ಹೊರ ಹರಿವು ಜಾಸ್ತಿಯಾಗುವ ಸಾಧ್ಯತೆಯಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯ ಇದಾಗಿದ್ದು, ಈಗಾಗಲೇ ಜಲಾಶಯ ಭರ್ತಿಯಾಗಿದೆ. ಇನ್ನೂ ಮತ್ತೆ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದವಾಗುತ್ತಿದ್ದು, ಕೃಷ್ಣಾ ನದಿ ತೀರಕ್ಕೆ ಜನರು ತೆರಳದಂತೆ ಯಾದಗಿರಿ ಜಿಲ್ಲಾಡಳಿತ ಸೂಚನೆ ನೀಡಿದೆ.
Advertisement
Advertisement
ಈಗಾಗಲೇ ನದಿ ತೀರದ ತಾಲೂಕಗಳಾದ ಶಹಾಪುರ, ಸುರಪುರ, ವಡಗೇರಾ, ಹುಣಸಗಿಯಲ್ಲಿ ಕಾಳಜಿ ಕೇಂದ್ರ ಗುರುತಿಸುವ ಕಾರ್ಯ ಆರಂಭಗೊಂಡಿದೆ. ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯುವ ತನಕ ಜಿಲ್ಲೆಯ ಯಾವುದೇ ಗ್ರಾಮಕ್ಕೆ ಅಪಾಯವಾಗುವುದಿಲ್ಲ. ಆದರೆ ಜಲಾಶಯದ ಹೊರ ಹರಿವು ಒಂದು ಲಕ್ಷ ಕ್ಯೂಸೆಕ್ ದಾಟಿದ್ರೆ, ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಸಂಪೂರ್ಣ ಸಂಪರ್ಕ ಕಳೆದುಕೊಂಡು, ನಡುಗಡ್ಡೆಯಾಗಲಿದೆ. ಇನ್ನೂ ಕೊಳ್ಳೂರು ಸೇತುವೆ ಮುಳುಗಡೆಯಾಗುವ ಸಾಧ್ಯತೆಯಿದೆ. ಛಾಯಾಭಗವತಿ ದೇವಸ್ಥಾನ ಮುಳುಗಡೆ ಸೇರಿದಂತೆ ಯಕ್ಷಚಿಂತಿ, ಗೌಡೂರು, ಯಮನೂರು, ಸೂಗೂರು ಗ್ರಾಮಗಳ ಜಮೀನಿಗಳು ಸಂಪೂರ್ಣ ನೀರಿನಲ್ಲಿ ಜಲಾವೃತಗೊಳ್ಳಲಿವೆ. ನೀರಿನ ಪ್ರಮಾಣ ಹೆಚ್ಚಾದಂತೆ ಗ್ರಾಮಗಳಿಗೂ ನೀರು ನುಗ್ಗುವ ಸಾಧ್ಯತೆ ಇದೆ.
Advertisement
ನಾರಾಯಣಪುರ ಜಲಾಶಯದ ಒಳಹರಿವು ಹೆಚ್ಚಳ- ಪ್ರವಾಹದ ಭೀತಿhttps://t.co/CrZjOzFng0#NarayanapurDam #KrishnaRiver #Raichur #Rain #KarnatakaRains #Flood
— PublicTV (@publictvnews) August 6, 2020
Advertisement
ಬಸವಸಾಗರ ಜಲಾಶಯ ಒಟ್ಟು 33.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ ಡ್ಯಾಂ ನಲ್ಲಿ 30.06 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಸದ್ಯ 50 ಸಾವಿರ ಕ್ಯೂಸೆಕ್ ಒಳಹರಿವು ಇದ್ದರೆ, ಒಟ್ಟು 24 ಗೇಟ್ ಗಳ ಪೈಕಿ ಏಳು ಗೇಟ್ ಗಳ ಮೂಲಕ 50 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಹಂತ ಹಂತವಾಗಿ ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.