– ಶೆಳ್ಳಗಿ, ಮುಷ್ಠಳ್ಳಿಯ 13 ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ
ಯಾದಗಿರಿ: ಬಸವಸಾಗರ ಜಲಾಶಯದಿಂದ ಮತ್ತೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಕೃಷ್ಣಾ ನದಿ ತೀರದ ದೇಗುಲಗಳು ಜಲಾವೃತಗೊಂಡಿವೆ.
ಜಲಾಶಯದಿಂದ ಕೃಷ್ಣಾ ನದಿಗೆ 4,17,740 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದ್ದು, ಸುರಪುರ ತಾಲೂಕಿನ ಮುಷ್ಠಳ್ಳಿ ಸಮೀಪದ ರಾಮಮಂದಿರ ಜಲದಿಗ್ಬಂಧನವಾಗಿದೆ. ದೇವಸ್ಥಾನ ಸುತ್ತಲೂ ನದಿಯ ನೀರು ಆವರಿಸಿದೆ. ನದಿ ತೀರದ ಗ್ರಾಮಗಳ ಸಮೀಪದಲ್ಲಿ ನದಿ ನೀರು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶೆಳ್ಳಗಿ, ಮುಷ್ಠಳ್ಳಿಯ 13 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಅಧಿಕಾರಿಗಳು ಬಿಡು ಬಿಟ್ಟಿದ್ದಾರೆ.
ಅಪಾರ ಪ್ರಮಾಣದ ಬೆಳೆ ಹಾನಿ:
ಕೃಷ್ಣಾ ನದಿಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ಅನ್ನದಾತರು ಕಣ್ಣೀರು ಹಾಕುವಂತಾಗಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4,17,740 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆ ನದಿಯ ಹಿನ್ನೀರು ರೈತರ ಜಮೀನಿಗೆ ನುಗ್ಗಿ ಭತ್ತ, ಹತ್ತಿ ಬೆಳೆ ನೀರು ಪಾಲಾಗಿ, ಅನ್ನದಾತರ ಬದುಕು ಕೊಚ್ಚಿ ಹೋಗಿದೆ. ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ ಗ್ರಾಮದ ಸಾವಿರಾರು ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ.
ಮತ್ತೊಂದು ಕಡೆ ಯಾದಗಿರಿ ಮತಕ್ಷೇತ್ರದ ವಡಗೇರಾ ತಾಲೂಕಿನ ಯಕ್ಷಂತಿ, ಗೌಡೂರು, ಎಂ ಕೊಳ್ಳೂರು ಗ್ರಾಮದ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಇಷ್ಟಾದರೂ ಜನರ ನೋವು ಆಲಿಸಲು ಯಾವುದೇ ಜನ ಪ್ರತಿನಿಧಿಗಳು ಬಂದಿಲ್ಲ, ಇದರಿಂದಾಗಿ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.