– ಪ್ರತಾಪ್ ಗೌಡ ಪಾಟೀಲ್ ಭರ್ಜರಿ ಪ್ರಚಾರ
ರಾಯಚೂರು: ಮಸ್ಕಿ ಉಪ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಸನಗೌಡ ತುರವಿಹಾಳ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಅಘೋಷಿತ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಪಕ್ಷಾಂತರದಿಂದ ತೆರವಾಗಿರುವ ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ರಾಜಕೀಯ ಚುರುಕುಗೊಂಡಿದೆ. ಉಪ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿಯ ವಾತಾವರಣ ನಿರ್ಮಾಣವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇವಲ 213 ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಸನಗೌಡ ತುರವಿಹಾಳ ಈಗ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಪ್ರತಾಪ್ ಗೌಡ ವಿರುದ್ಧ ಅಕ್ರಮ ಮತದಾನದ ಪ್ರಕರಣ ದಾಖಲಿಸಿದ್ದ ಬಸನಗೌಡರನ್ನು ಬಿಜೆಪಿ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದೆ. ಹೀಗಾಗಿ ಚುನಾವಣಾ ಕಣ ರಂಗೇರಿದೆ.
ಬಿಜೆಪಿ ಟಿಕೆಟ್ ಬಹುತೇಕ ಪ್ರತಾಪ್ ಗೌಡ ಅವರಿಗೆ ಖಾಯಂ ಆಗಿರುವುದರಿಂದ ಬಸನಗೌಡ ತುರವಿಹಾಳ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ್ ಸೇರಿ ಹಲವು ಮುಖಂಡರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಮಸ್ಕಿ ಉಪ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಪ್ರತಾಪ್ ಗೌಡ ಪಾಟೀಲ್ ಹಾಗೂ ಬಸನಗೌಡ ನಡುವೆ ತುರುಸಿನ ಸ್ಪರ್ಧೆ ನಡೆಯುವ ಸಾಧ್ಯತೆಗಳಿವೆ. ಆದರೆ ಇಬ್ಬರು ಅಭ್ಯರ್ಥಿಗಳ ಪಕ್ಷಗಳು ಮಾತ್ರ ಬದಲಾಗಲಿವೆ.
ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ರಾಜೀನಾಮೆ ನೀಡಿದ ಪತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಇನ್ನೂ ಪ್ರತಾಪ್ ಗೌಡ ಪಾಟೀಲ್ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ನೂರಾರು ಕಾರ್ಯಕರ್ತರೊಂದಿಗೆ ಮಸ್ಕಿಯಲ್ಲಿ ಬೈಕ್ ರ್ಯಾಲಿ ಮಾಡಿದ್ದಾರೆ. ನೂರಾರು ಕಾರ್ಯಕರ್ತರನ್ನ ಸೇರಿ ಪಕ್ಷದ ಕಾರ್ಯಕ್ರಮವನ್ನು ಮಾಡಿದ್ದಾರೆ. ಆದರೆ ಪ್ರತಾಪ್ ಗೌಡ ವಿರುದ್ಧದ ಪ್ರಕರಣ ವಜಾಗೊಂಡಿರುವ ತೀರ್ಪಿನ ಪ್ರತಿ ಇನ್ನೂ ಕೈ ಸೇರಿಲ್ಲ. ತೀರ್ಪಿನ ಪ್ರತಿ ಸಿಕ್ಕ ನಂತರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗುವುದು ಅಂತ ಪ್ರತಾಪ್ ಗೌಡ ಹೇಳಿದ್ದಾರೆ.
ಬಸವಕಲ್ಯಾಣ, ಬೆಳಗಾವಿ ಚುನಾವಣೆಯೊಂದಿಗೆ ಮಸ್ಕಿ ಉಪ ಚುನಾವಣೆ ನಡೆಯುವ ಸಾಧ್ಯತೆಯಿದೆ. ಡಿಸೆಂಬರ್ ಕೊನೆಯಲ್ಲಿ ಚುನಾವಣೆ ಬರಬಹುದು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಅಂತ ಪ್ರತಾಪ್ ಗೌಡ ಪಾಟೀಲ್ ತಿಳಿಸಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಜೋರಾಗಿದೆ. ಕಾಂಗ್ರೆಸ್ ಬಿಜೆಪಿಗೂ ಮಸ್ಕಿ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ಟಿಕೆಟ್ ಬಸನಗೌಡಗೆ ಬಹುತೇಕ ಖಚಿತವಾಗಿರುವುದರಿಂದ ಭರ್ಜರಿ ಪೈಪೋಟಿ ನಿರೀಕ್ಷೆಯಿದೆ.