ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಧಾರಕಾರ ಮಳೆಯಾಗುತ್ತಿದ್ದು, ಬೆಳ್ಳಂಬೆಳಿಗ್ಗೆ ವರಣುದೇವ ಜಿಲ್ಲೆಯಲ್ಲಿ ಆರ್ಭಟಿಸುತ್ತಿದ್ದಾನೆ. ಬೆಳಿಗ್ಗೆ 5 ಗಂಟೆಯಿಂದಲೇ ವರುಣನ ಅರ್ಭಟ ಶುರುವಾಗಿದ್ದು, ಸತತ 4-5 ಗಂಟೆಗಳ ಕಾಲ ಬಿಟ್ಟು ಬಿಡದೆ ಮಳೆರಾಯ ಅಬ್ಬರಿಸಿದ್ದಾನೆ.
ಪರಿಣಾಮ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳ ಕೆರೆ ಕುಂಟೆ ಕಾಲುವೆಗಳು ಸಂಪೂರ್ಣ ಜಲಾವೃತವಾಗಿವೆ. ಚಿಕ್ಕಬಳ್ಳಾಪುರ ತಾಲೂಕಿನ ಜರಮಡಗು ಅರಣ್ಯಪ್ರದೇಶದಿಂದ ಮಾವಿನಕೆರೆಗೆ ರಭಸವಾಗಿ ನೀರು ಹರಿದುಬರುತ್ತಿದ್ದು, ಸುತ್ತ ಮುತ್ತಲ ಜನ ಸಖತ್ ಖುಷಿಪಡುತ್ತಿದ್ದಾರೆ. ಗುಡಿಬಂಡೆ ತಾಲೂಕಿನ ಹಲವೆಡೆಯೂ ಭರ್ಜರಿ ಮಳೆಯಾಗಿದ್ದು, ಕೋರೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿ ಮೆಣಿಸಿನಕಾಯಿ ತೋಟ ಜಲಾವೃತವಾಗಿದೆ.
ಚಿಂತಾಮಣಿ ತಾಲೂಕಿನಾದ್ಯಾಂತ ಭಾರೀ ಮಳೆಯಾಗಿದ್ದು, ಕೋಟಗಲ್, ಅನಕಲ್, ಕೆ.ರಾಗುಟ್ಟಹಳ್ಳಿ ಸೇರಿ ಬಾಗೇಪಲ್ಲಿ ತಾಲೂಕಿನ ಮಾಡಪ್ಪಲ್ಲಿ, ಹೊನ್ನಂಪಲ್ಲಿ ಸೇರಿದಂತೆ ಹಲವು ಕೆರೆಗಳು ಕೋಡಿ ಹರಿದಿವೆ. ಜಿಲ್ಲೆಯ ಬಹುತೇಕ ಕೆರೆಗಳಿಗೆ ಮಳೆನೀರು ಹರಿದು ಬರುತ್ತಿದ್ದು, ಜಿಲ್ಲೆಯ ಜನತೆಗೆ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮಳೆಯಿಂದ ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದ್ದರೂ ಕೆರೆಗಳು ತುಂಬುತ್ತಿರುವುದು ಅಂತರ್ಜಲ ಅಭಿವೃದ್ಧಿ ಆಗಲಿದೆ ಅಂತ ಸಂತೋಷ ತರುತ್ತದೆ.
ಮತ್ತೊಂದಡೆ ರೈತರು ಬೆಳೆದ ಬೆಳೆಗಳು ಮಳೆಪಾಲಾಗುತ್ತಿದ್ದು, ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದ ಜಾತವಾರ ಹೊಸಹಳ್ಳಿ ಬಳಿಯ ರೈಲ್ವೇ ಅಂಡರ್ ಪಾಸ್ ಜಲಾವೃತವಾಗಿ ವಾಹನಸವಾರರು ಪರದಾಡುವಂತಾಗಿದೆ.